ಶಿವಮೊಗ್ಗ : ಕೆಲಸ ಕೊಡಿಸುವುದಾಗಿ ನಂಬಿಸಿ ಆಂಧ್ರ ಮೂಲದ ವ್ಯಕ್ತಿಯೊಬ್ಬ ಹೊಳೆಹೊನ್ನೂರು ಸಮೀಪದ ಮಾಳೇನಹಳ್ಳಿ ವ್ಯಕ್ತಿಯೊಬ್ಬರಿಗೆ 70 ಲಕ್ಷ ವಂಚಿಸಿದ್ದಾನೆ.
ಶಿವಮೊಗ್ಗ ತಾಲ್ಲೂಕಿನ ಮಾಳೇನಹಳ್ಳಿಯ ಎಂ.ಸಿ. ರಂಗನಾಥ ಹಣ ಕಳೆದುಕೊಂಡವರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚಿಕ್ಕಣ್ಣ ಮೋಸ ಮಾಡಿದ ವ್ಯಕ್ತಿ.
ಅರಸೀಕೆರೆ ತಾಲ್ಲೂಕಿನ ಗಂಡಸಿ ಗ್ರಾಮದ ಮಾನಸ ಎಂಬುವರಿಂದ ರಂಗನಾಥ ಅವರಿಗೆ ಚಿಕ್ಕಣ್ಣನ ಪರಿಚಯವಾಗಿದೆ. ಕಾಂಟ್ರಾಕ್ಟ್ ಬೇಸಿಕ್ ಕೆಲಸ ಕೊಡಿಸುತ್ತೇನೆ. ಬಳಿಕ ಪರ್ಮನೆಂಟ್ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ರಂಗನಾಥ್ ಅವರು ಚಿಕ್ಕಣ್ಣನಿಗೆ 2016 ರಿಂದ 2021ರ ಅಕ್ಟೋಬರ್ವರೆಗೆ ಹಲವು ಕಂತುಗಳಲ್ಲಿ ೮೭.೫೩ ಲಕ್ಷವನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ೧೬.೯೦ ಲಕ್ಷವನ್ನು ವಸೂಲಿ ಮಾಡಿದ್ದಾರೆ. ಸುಮಾರು 70 ಲಕ್ಷ ಬಾಕಿ ಬರಬೇಕಾಗಿದೆ. ಎಷ್ಟು ದಿನ ಕಾಯ್ದರೂ ರೈಲ್ವೇ ಇಲಾಖೆಯಿಂದ ಯಾವುದೇ ನೇಮಕಾತಿ ಪತ್ರ ಬರಲಿಲ್ಲ. ಇದರಿಂದ ಹಣವನ್ನು ನಮಗೆ ವಾಪಸ್ ಕೊಡು ಎಂದು ಮೋಸ ಮಾಡಿದ ಚಿಕ್ಕಣ್ಣನ ಬಳಿ ಕೇಳಿದ್ದಾರೆ.
ಆದರೆ ಇತ್ತೀಚೆಗೆ ಚಿಕ್ಕಣ್ಣನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆಂಧ್ರಕ್ಕೆ ಹೋದರೂ ಆತ ಸಿಗುತ್ತಿಲ್ಲ. ಇದರಿಂದ ಬೇಸತ್ತ ರಂಗನಾಥ ಅವರು ಹೊಳೆಹೊನ್ನೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.