ಶಿವಮೊಗ್ಗ : ಮಹಾವೀರ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಯುತ್ತಿರುವಾಗಲೇ ಯುವ ಕಾಂಗ್ರೆಸ್ನ ಒಂದು ತಂಡ ನಗರದ ಬಿಜೆಪಿ ಜಿಲ್ಲಾ ಕಛೇರಿಗೆ ದಿಢೀರ್ ಮುತ್ತಿಗೆ ಹಾಕಲು ಯತ್ನಿಸಿತು. ಪ್ರತಿಭಟನೆಯ ಸುಳಿವರಿತ ಪೊಲೀಸರು ಮೊದಲೇ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದರೂ ಸಹ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡನ್ನು ತಳ್ಳಿ, ಬಿಜೆಪಿ ಕಛೇರಿ ಕಛೇರಿಗೆ ನುಗ್ಗಿದರು.

ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಬಿಜೆಪಿ ಕಛೇರಿಯ ಬಾಗಿಲು ಹಾಕಿದರು. ಆ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ಪೊಲೀಸ್ ವಾಹನದ ಮೇಲೆ ಹತ್ತಿ ಕಾಂಗ್ರೆಸ್ ಧ್ವಜಹಾರಿಸಿ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗುಂಪು ಬಿಜೆಪಿ ಕಛೇರಿಗೆ ಚಪ್ಪಲಿ ತೂರಿದ್ದಲ್ಲದೆ, ಪಕ್ಕದಲ್ಲಿದ್ದ ಗ್ರಾಮಾಂತರ ಬಿಜೆಪಿ ಕಛೇರಿಗೆ ನುಗ್ಗಿ ಪಿಠೋಪಕರಣ ಧ್ವಂಸಕ್ಕೆ ಯತ್ನಿಸಿತು.
ಸ್ಥಳದಲ್ಲಿದ್ದ ಬ್ಯಾಂಕೊಂದರ ಸಿಬ್ಬಂದಿಯ ದ್ವಿಚಕ್ರ ವಾಹನಕ್ಕೂ ಹಾನಿ ಮಾಡಿತು ಎನ್ನಲಾಗಿದೆ. ಪೊಲೀಸರು ಹರಸಾಹಸ ಮಾಡಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಡಾ. ಶರತ್ ಮರಿಯಪ್ಪ, ಕೇಶವ, ಎಂ.ಬಿ. ಪ್ರವೀಣ್, ಕುಮರೇಶ್, ಜಿ.ಡಿ.ಮಂಜುನಾಥ್, ಕೆ.ರಂಗನಾಥ್, ರಾಹುಲ್, ಮಿಥುನ್, ಆರೀಫ್ ಮತ್ತಿತರರಿದ್ದರು.