ಶಿವಮೊಗ್ಗ : ಜುಲೈ ೨೩ : ಜಿಲ್ಲಾ ಕೇಂದ್ರದಿಂದ ರಾಜಧಾನಿಯವರೆಗೆ ಬೆಳೆಯುವಲ್ಲಿ ಸಿ.ಎಸ್.ಷಡಾಕ್ಷರಿಯವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳೇ ಪ್ರಮುಖ ಕಾರಣ. ಇದರೊಂದಿಗೆ ಅವರಲಿದ್ದ ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದವು ಎಂದು ಹಿರಿಯ ವಕೀಲ ಕೆ.ಬಸಪ್ಪಗೌಡ ಅವರು ಶ್ಲಾಘಿಸಿದರು.


ಅವರು ನಿನ್ನೆ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಿ.ಎಸ್.ಷಡಾಕ್ಷರಿ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಿ.ಎಸ್.ಷಡಾಕ್ಷರಿ ಅವರ ೪೭ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಇಲಾಖೆಯಲ್ಲಿ ಸಾಮಾನ್ಯ ಹುದ್ದೆಗೆ ನೇಮಕಗೊಂಡು ರಾಜ್ಯಾಧ್ಯಕ್ಷ ಸ್ಥಾನದವರೆಗಿನ ಸಾಧನೆ ಸಾಮಾನ್ಯವೇನಲ್ಲ ಎಂದ ಅವರು ಯಾವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿಯ ಗುಣಗಳಿರುತ್ತವೆಯೋ ಅಂತವರಿಗೆ ಎಲ್ಲಾ ಸ್ಥಾನಮಾನಗಳು ಸಹಜವಾಗಿ ಹುಡುಕಿಕೊಂಡು ಬರುತ್ತವೆ ಎಂದ ಅವರು ಷಡಾಕ್ಷರಿ ಅವರು ಕೇವಲ ಸರ್ಕಾರಿ ನೌಕರರಿಗೆ ನಾಯಕ ರಾಗದೇ ರಾಜ್ಯದ ಎಲ್ಲಾ ವರ್ಗದ ಜನರ ನಾಯಕ ರಾಗುವಂತಹ ಅವಕಾಶ ದೊರೆಯುವಂತಾಗಲಿ ಎಂದು ಆಶಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಷಡಾಕ್ಷರಿಗಿಂತ ಮುಂಚೆ ರಾಜ್ಯಾಧ್ಯಕ್ಷರಾದವರು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದು ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಷಡಾಕ್ಷರಿಯವರು ಸರ್ಕಾರದೊಂದಿಗೆ ಸೌಹಾರ್ದಯುತವಾಗಿ, ಸ್ನೇಹಪೂರ್ವಕವಾಗಿದ್ದುಕೊಂಡು ಅತ್ಯಂತ ಜಾಣ್ಮೆಯಿಂದ ಸಂಘದ ಹಾಗೂ ರಾಜ್ಯದ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಷಡಾಕ್ಷರಿಯವರಲ್ಲಿ ಗುರುತಿಸಬಹುದಾದ ಗುಣಲಕ್ಷಣ ಎಂದವರು ನುಡಿದರು.
ಸಂಘಟನೆ, ಬದ್ದತೆ, ಬುದ್ದಿವಂತಿಕೆ ಇವೆಲ್ಲವನ್ನೂ ಮೈಗೂಡಿಸಿಕೊಂಡಾಗ ನಾಯಕರಾಗಿ ಬೆಳೆಯಲು ಸಾಧ್ಯ, ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯದೇ ಸಂಘಟನೆ ಹಾಗೂ ಸಂಘವೇ ನನ್ನ ಮೂಲ ಕಾರ್ಯ ಎಂಬ ಉದ್ದೇಶದಿಂದ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವೇ ಸಾವಿರಾರು ಸಂಖ್ಯೆಯಲ್ಲಿ ನೌಕರರ ಸಮೂಹ ಹಾಗೂ ಅವರ ಹಿತೈಷಿಗಳು ಸೇರಿರು ವುದು ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸತೀಶ್ಕುಮಾರ್ ಶೆಟ್ಟಿ, ಡಿಎಸ್ಎಸ್ ಗುರುಮೂರ್ತಿ, ಡಾ|| ವಾಣಿಕೋರಿ , ಮ.ಸ.ನಂಜುಂಡಸ್ವಾಮಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಪತ್ರಕರ್ತ ವೈ.ಕೆ. ಸೂರ್ಯ ನಾರಾಯಣ್, ಮಹೇಶ್ವರಪ್ಪ, ಷಡಾಕ್ಷರಿ ಅವರ ತಾಯಿ ಶ್ರೀಮತಿ ಬೋರಾಂಬಿಕಾ, ಪತ್ನಿ ಬೇಬಿ, ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.

ವಿವಿದೆಡೆ ನಡೆದ ಸಮಾಜಮುಖಿ ಕಾರ್ಯಕ್ರಮಗಳು 😕 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆಶ್ರಮದಲ್ಲಿನ ವೃದ್ಧರಿಗೆ ಹಣ್ಣು ವಿತರಿಸಲಾಯಿತು.
ಯಡಿಯೂರಪ್ಪ ಉಚಿತ ವಿದ್ಯಾರ್ಥಿನಿಲಯದ ಎದುರು ಸಸಿ ನೆಡಲಾಯಿತು.
ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು.
ನಗರದ ಮೆಗ್ಗಾನ್ಆಸ್ಪತ್ರೆ ಆವರಣದಲ್ಲಿ ದೇಶೀಯ ದರ್ಶಿನಿಯ ಅವಿನಾಶ್ಬಿದರೆ ಅನ್ನದಾಸೋಹವನ್ನು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ ಹಾಗೂ ಅವರ ಕುಟುಂಬಸ್ಥರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರ ಜನ್ಮದಿನದ ಅಂಗವಾಗಿ, ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ವತಿಯಿಂದ ಶಾರದಾ ದೇವಿ ಅಂದರ ವಿಕಾಸ ಕೇಂದ್ರದಲ್ಲಿ ವಿಶೇಷ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಅಂದರ ವಿಕಾಸ ಕೇಂದ್ರದ ಮಕ್ಕಳಿಗೆ ಸಿಹಿತಿನಿಸು ಹಾಗೂ ಹಣ್ಣುಗಳನ್ನು ವಿತರಿಸಿ, ಅವರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳಲಾಯಿತು.
ಸಮಾಜಮುಖಿ ಮೌಲ್ಯಗಳು, ಸೇವಾ ಮನೋಭಾವ ಹಾಗೂ ಮಾನವೀಯ ಕಾಳಜಿಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಆಹ್ವಾನವೇ ಇಲ್ಲದೆ ಸಹಸ್ರಾರು ಸಂಖ್ಯೆ ಅಭಿಮಾನಿಗಳು ನೆರೆದು ಅಭಿನಂದಿಸಿದ್ದು, ಅಪರೂಪವೆನಿಸಿತ್ತು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮೋಹನ್ಕುಮಾರ್, ಬಳ್ಳೆಕೆರೆ ಸಂತೋಷ್, ಆರ್.ಪಾಪಣ್ಣ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಿ.ಎಸ್.ಷಡಾಕ್ಷರಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.