ಶಿವಮೊಗ್ಗ: ತರಗತಿಗಳನ್ನು ಏಕಮುಖ ಬೋಧನೆಯ ವೇದಿಕೆಯಾಗಿರಿಸದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದದ ವಾತಾವರಣ ನಿರ್ಮಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಬದ್ರ ಬುನಾದಿ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವತಿಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್.ಎಸ್.ಎಸ್ ಘಟಕ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
ವಿದ್ಯಾರ್ಥಿಗಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಪ್ರೇರಣೆ ನೀಡುವಂತಹ, ಮೌಲ್ಯಾಧಾರಿತ ಸರ್ವತೋಮುಖ ಬೆಳವಣಿಗೆ ಸಾಧಿಸಲು ವಿವಿಧ ವಿದ್ಯಾರ್ಥಿ ಘಟಕಗಳು ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ವಯೋಸಹಜ ಆಕರ್ಷಣೆಗಳ ಅಂಧತ್ವಕ್ಕೆ ಒಳಗಾಗದಿರಿ. ನಿಮ್ಮ ಗುರಿಯತ್ತ ಏಕಾಗ್ರತೆಯಿಂದ ಸಾಗಬೇಕು. ಕಲಿಯುವ ಪ್ರತಿಯೊಂದು ವಿಷಯದಲ್ಲೂ ಹೊಸತನವನ್ನು ಅರಿಯುವ ಉತ್ಸುಕತೆ ಬೆಳೆಸಿಕೊಳ್ಳಿ. ಪೋಷಕರ ಆಶೋತ್ತರಗಳನ್ನು ಗೌರವಿಸಿ, ಜವಾಬ್ದಾರಿಯುತ ನಡೆ-ನುಡಿಯೊಂದಿಗೆ ಹೊರಹೊಮ್ಮಿ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಗುಂಡಪಲ್ಲಿ ಮಾತನಾಡಿ, ಜೀವನದಲ್ಲಿ ಸಾಧನೆಯ ಶಿಖರವನ್ನು ತಲುಪಲು ಬುದ್ಧಿವಂತಿಕೆಯ ಜೊತೆಗೆ, ಶಿಸ್ತು, ಉತ್ತಮ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಅತಿ ಮುಖ್ಯ. ಮಕ್ಕಳ ವಿದ್ಯಾಭ್ಯಾಸವನ್ನು ಕೇವಲ ಕಾಲೇಜಿನ ಜವಾಬ್ದಾರಿಯೆಂದು ಭಾವಿಸದೆ, ಪೋಷಕರು ಕಾಲಕಾಲಕ್ಕೆ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚೆ ನಡೆಸಬೇಕು. ಮಕ್ಕಳ ಕಲಿಕೆಯ ಪ್ರಗತಿ, ನಡವಳಿಕೆ, ಆಸಕ್ತಿ ಹಾಗೂ ಸವಾಲುಗಳ ಕುರಿತು, ನಿರಂತರವಾಗಿ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ.ಪ್ರತಿಯೊಂದು ಅವಕಾಶವನ್ನೂ ಕಲಿಕೆಯ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳುವ ಮನೋಭಾವವೇ ವಿದ್ಯಾರ್ಥಿಯನ್ನು ಸಾಮಾನ್ಯರಿಂದ ಅಸಾಮಾನ್ಯರನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ಖ್ಯಾತ ವೈದ್ಯರಾದ ಡಾ.ವಿನಯ ಶ್ರೀನಿವಾಸ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಆರ್.ಆದಿತ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಫ್.ಕುಟ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.