ವರದಿ ರವಿ ಶಿವಮೊಗ್ಗ
ಶಿಕಾರಿಪುರ ಜು 23:
ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಪತ್ತೆ ಹಚ್ಚಿ ಪುನಃ ಶಾಲೆಗೆ ಸೇರಿಸುವ ಮೂಲಕ ಮಕ್ಕಳ ಬದುಕಿಗೆ ಹೊಸ ಭರವಸೆ ತುಂಬುವ ನಿಟ್ಟಿನಲ್ಲಿ ಮರಳಿ ಶಾಲೆಗೆ ಕರೆತರುವ ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗ ಜಿಲ್ಲಾದ್ಯಾಂತ ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗುತ್ತಿದ್ದು ಶಿವಮೊಗ್ಗ ಸೇರಿದಂತೆ ಶಿಕಾರಿಪುರ ಗ್ರಾಮಾಂತರ ಠಾಣೆಯ ಪೊಲೀಸರು ಕೂಡ ಈ ಕಾರ್ಯಕ್ಕೆ ಮುಂದಾಗಿದ್ದು ಇತ್ತೀಚೆಗೆ ಶಿಕಾರಿಪುರದ ಗ್ರಾಮಾಂತರ ಠಾಣೆ ವ್ಯಾಪ್ತಿಯ ಈಸೂರು ಗ್ರಾಮದಲ್ಲಿ ಬಡತನ, ಆರ್ಥಿಕ, ಇನ್ನು ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿದ್ದ 14 ಮಕ್ಕಳನ್ನು

ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆಹಚ್ಚಿ, ಅವರನ್ನು ಮತ್ತೆ ಶಿಕ್ಷಣ ಕಲಿಯಲು ಶಾಲೆಗೆ ಸೇರಿಸುವ ಮೂಲಕ ಯಶಸ್ವಿಯಾಗಿದ್ದಾರೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಎಸ್ಪಿ ನಿಖಿಲ್ ಬಿ ಅವರ ಮಾರ್ಗದರ್ಶನ ಹಾಗೂ ಶಿಕಾರಿಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ್ ರವರ ನೇತೃತ್ವದಲ್ಲಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಧನವಿನಮನಿ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹಾಲೇಶಪ್ಪ ಅವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮನೆ ಮನೆಗೆ ತೆರಳಿ ಶಾಲೆ ಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸಿ. ಬಳಿಕ ಮಕ್ಕಳ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಮಕ್ಕಳ ವಿದ್ಯಾಭ್ಯಾಸ ನಿಲ್ಲುವುದರಿಂದ ಉಂಟಾಗುವ ಅನಾಹುತಗಳು,ಬಾಲಕಾರ್ಮಿಕತೆ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಪೊಲೀಸರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲು ಮುಂದಾದರು. ಈ ಮೂಲಕ ಶಿಕಾರಿಪುರ ವಿವಿಧ ಗ್ರಾಮಗಳಲ್ಲಿ ಶಾಲೆ ಬಿಟ್ಟಿದ್ದ 14 ಮಕ್ಕಳನ್ನು ಈಸೂರು ಗ್ರಾಮದ ಸರ್ಕಾರಿ ಶಾಲೆಗೆ ದಾಖಲಿಸಿ, ಅವರ ಶೈಕ್ಷಣಿಕ ಜೀವನವನ್ನು ಪುನರಾರಂಭಿಸಲಾಯಿತು.ಈ ಕಾರ್ಯಾಚರಣೆ ಕೇವಲ ಮಕ್ಕಳನ್ನು ಶಾಲೆಗೆ

ಸೇರಿಸುವುದರಲ್ಲೇ ಸೀಮಿತವಾಗದೇ, ಶಿಕ್ಷಣದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನವಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಾಲೆ ಸಮಾಜದ ಜೊತೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯೂ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂಬುದನ್ನು ಈ ಕಾರ್ಯ ಸಾಬೀತುಪಡಿಸಿದೆ. ಸಾರ್ವಜನಿಕರು ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದು, ಇಂತಹ ಜನಪರ ಕಾರ್ಯಕ್ರಮಗಳು ಶಿವಮೊಗ್ಗ ಜಿಲ್ಲೆಯ ಇತರೆ ಗ್ರಾಮಗಳು ನಗರಗಳಲ್ಲಿಯೂ ಮುಂದುವರಿದರೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಿಕ್ಷಣಕ್ಕೆ ಕರೆತರುವುದರಿಂದ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಮಕ್ಕಳು ಶಾಲೆ ಬಿಟ್ಟು ಅಲೆದಾಡುವುದರಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಮತ್ತು ಸಮಾಜ ಜಾಗೃತರಾಗಬೇಕು
ಏನು ತಿಳಿಯದೆ ಇರೋ ವಯಸ್ಸಿನ ಮಕ್ಕಳು ಕೆಲವೊಮ್ಮೆ ತಮಗೆ ಅರಿವಿಲ್ಲದೆ ಪೋಕ್ಸೊ ಪ್ರಕರಣಗಳಂತಹ ಗಂಭೀರ ಕಾನೂನು ಸಮಸ್ಯೆಗಳಲ್ಲಿ ಸಿಲುಕುವ ಘಟನೆಗಳು ನಡೆಯುತ್ತಿವೆ. ಅಲ್ಲದೆ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ದುಷ್ಪರಿಣಾಮಕ್ಕೆ ಒಳಗಾಗುವ ಅಪಾಯವೂ ಇದೆ. ಶಾಲೆಯಲ್ಲಿ ನಿರಂತರ ಶಿಕ್ಷಣ, ಉತ್ತಮ ಮಾರ್ಗದರ್ಶನ ಹಾಗೂ ಮೌಲ್ಯಾಧಾರಿತ ಜೀವನದ ಮೂಲಕ ಇಂತಹ ದುಷ್ಪರಿಣಾಮಗಳಿಂದ ಮಕ್ಕಳನ್ನು ದೂರವಿಡಲು ಸಾಧ್ಯವಾಗುತ್ತದೆ
ಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಶಾಲೆ, ಪೋಷಕರು, ಪೊಲೀಸ್ ಇಲಾಖೆ ಹಾಗೂ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಕಾನೂನುಬದ್ಧ ಸಮಾಜ ನಿರ್ಮಾಣ ಸಾಧ್ಯ
ಶಿಕಾರಿಪುರ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಆರ್ ಆರ್ ಪಾಟೀಲ್