ಶಿವಮೊಗ್ಗ : ಇಂದು ನಗರದಲ್ಲಿ ನೀಟ್ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಛೇರಿಗೆ ನುಗ್ಗಿ ಹಂಗಾಮ ಎಬ್ಬಿಸಿದ ಕೆಲವೇ ಕ್ಷಣದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಛೇರಿಗೆ ನುಗ್ಗಿ ಕಲ್ಲುತೂರಾಟಕ್ಕೆ ಯತ್ನಿಸಿದರು. ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದಿದ್ದ ಬೃಹತ್ ಬ್ಯಾನರ್ ಅನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನವೇ ಕಾಂಗ್ರೆಸ್ ಕಛೇರಿಯ ರಸ್ತೆಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆದರೂ ಸಂದಿಯಲ್ಲಿ ನುಗ್ಗಿದ 15ಕ್ಕೂ ಬಿಜೆಪಿ ಕಾರ್ಯಕರ್ತರನ್ನು ಸ್ಥಳದಲ್ಲೇ ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಕಾಲಿಗೆ ಗಂಭೀರ ಗಾಯವಾಯಿತು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಿಜೆಪಿ ಯುವ ಮುಖಂಡರಾದ ರಾಹುಲ್ ಬಿದಿರೆ, ಚಿದಾನಂದ, ಸಂತೋಷ್, ದರ್ಶನ್, ದೀನ್ದಯಾಳ್ ಮತ್ತಿತರರಿದ್ದರು.

ಮತ್ತೆ ಕೌಂಟರ್ ನೀಡಿದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಬಿಜೆಪಿ ಗೂಂಡಾವರ್ತನೆಗೆ ಪ್ರತಿಭಟನೆ ನಡೆಸಿದರು. ಮತ್ತೆ ಸ್ಥಳದಲ್ಲಿ ಉದ್ವಿಗ್ವ ವಾತಾವರಣ ಉಂಟಾಯಿತು. ಬೆಳಿಗ್ಗೆಯಿಂದಲೇ ಎರಡೂ ಪಕ್ಷದ ಕಾರ್ಯಕರ್ತರ ಹೈಡ್ರಾಮಾ ನೋಡಿ ಬೇಸತ್ತ ಪೊಲೀಸರು ಕೂಡಲೇ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಎಸ್.ಪಿ.ಶೇಷಾದ್ರಿ, ಕೆ.ರಂಗನಾಥ್, ಹೆಚ್.ಪಿ. ಗಿರೀಶ್, ಕೇಶವ, ಬಾಬು ಸೇರಿದಂತೆ ಯುವ ಕಾಂಗ್ರೆಸ್ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇಂದಿನ ಘಟನೆಗೆ ಸಂಬಂಧಿಸಿದಂತೆ ಎರಡೂ ಪಕ್ಷದ ನಾಯಕರ ಮೇಲೆ ಎಫ್ಐಆರ್ ದಾಖಲಿಸಿ ಕಠಿಣಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.