ಸಾಗರ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮಗುವೊಂದು ಅನಾರೋಗ್ಯದಿಂದ ಮೃತಪಟ್ಟಿರುವುದು ಅಂಬ್ಯುಲೆನ್ಸ್ ಸಿಗದೆ ಎಂದು ತಪ್ಪು ಅಭಿಪ್ರಾಯ ಹರಡಲಾಗುತ್ತಿದೆ. ಆದರೆ ಮಗು ಮಗು ಮೃತಪಟ್ಟಿಲ್ಲ ಎಂದು ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನನ್ಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ ಮಗು ಹಾಲು ಕುಡಿದ ನಂತರ ನೆತ್ತಿಗೆ ಹತ್ತಿ, ಅಸ್ವಸ್ಥಗೊಂಡಿತ್ತು. ಮಗುವನ್ನು ಹೊಸನಗರ ತಾಲ್ಲೂಕಿನ ನಿಟ್ಟೂರಿಗೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಕರೆದುಕೊಂಡು ಹೋಗುವಾಗ ಮಗು ಮಾರ್ಗಮಧ್ಯದಲ್ಲಿ ಮೃತಪಟ್ಟಿದೆ. ಹಿಂದೆ ಮಗುವನ್ನು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ನಾವು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಕ್ಕಳ ತಜ್ಞರ ಬಳಿ ತೋರಿಸಲು ಸಲಹೆ ನೀಡಿದ್ದೇವೆ. ಆದರೆ ಮಗು ದುರದೃಷ್ಟವಶಾತ್ ಮೃತಪಟ್ಟಿದೆ. ಮಗು ಸಾವಿಗೆ ಅಂಬ್ಯುಲೆನ್ಸ್ ಸಿಗದಿರುವುದೇ ಕಾರಣ ಎಂದು ಬಿಂಬಿಸುವ ಪ್ರಯತ್ನ ಸರಿಯಲ್ಲ ಎಂದು ತಿಳಿಸಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಮಾತನಾಡಿ, ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕರ ಪ್ರಯತ್ನದಿಂದ ಸುಸಜ್ಜಿತವಾದ ಅಂಬ್ಯುಲೆನ್ಸ್ ಬಿಡಲಾಗಿದೆ. ಹೊಸ ಅಂಬ್ಯುಲೆನ್ಸ್ ಆಗಿರುವುದರಿಂದ ಕಳೆದ ಮೂರು ದಿನಗಳ ಹಿಂದೆ ಸರ್ವಿಸ್ಗೆ ತೆಗೆದುಕೊಂಡು ಹೋಗಲಾಗಿತ್ತು. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಒಂದು ಜೀಪನ್ನು ದಿನದ ೨೪ ಗಂಟೆಯೂ ಸೇವೆಗೆ ಅನುಕೂಲವಾಗುವಂತೆ ಬಿಡಲಾಗಿದೆ. ಮಗು ಮೃತಪಟ್ಟಿದ್ದಕ್ಕೆ ಅಂಬ್ಯುಲೆನ್ಸ್ ಕಾರಣ ಎಂದು ತಪ್ಪು ಮಾಹಿತಿ ಹರಡಿದರೆ ವೈದ್ಯಸಿಬ್ಬಂದಿಗಳು ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಲು ತೊಡಕಾಗುತ್ತದೆ. ತುಮರಿ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಸರ್ವಿಸ್ ಮುಗಿಸಿ ಸದ್ಯದಲ್ಲೆ ಬರಲಿದ್ದು, ಹೆಚ್ಚುವರಿಯಾಗಿ ಇನ್ನೊಂದು ಅಂಬ್ಯುಲೆನ್ಸ್ ತರುವ ಪ್ರಯತ್ನ ಸಹ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.