ಶಿವಮೊಗ್ಗ: ಫೆಬ್ರವರಿ ಮಾಹೆಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೋನ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 22 ಮತ್ತು 23 ರಂದು ನಡೆಸಲು ಜಾತ್ರಾ ಸಮಿತಿಯು ನಿರ್ಧರಿಸಿದೆ.
ಸೋಂಕಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಂದಿನ ಸ್ಥಿತಿಗಳನ್ನಾಧರಿಸಿ ಜಾತ್ರೆ ನಡೆಸಲು ಕ್ರಮ ವಹಿಸಲಾಗುವುದು. ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹೊರಗಿನ ಊರುಗಳಿಂದ ಭಕ್ತಾಧಿಗಳ ಆಗಮಿಸದಂತೆ ನಿಯಂತ್ರಿಸಿ, ಸಮಿತಿಯವರು ಮಾತ್ರ ಸಾಂಕೇತಿಕವಾಗಿ ಆಚರಿಸಲು, ನಿಯಂತ್ರಣದಲ್ಲಿದ್ದರೆ ಅಂಗಡಿ, ಮುಂಗಟ್ಟು, ಸ್ಟಾಲ್ ಮತ್ತು ಎಕ್ಸಿಬಿಷನ್‌ಗಳಿಗೆ ಅವಕಾಶವಿಲ್ಲದಂತೆ ಹಾಗೂ ಕಡಿಮೆಯಾಗಿದ್ದರೆ ಸಹಜವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಈ ನಿರ್ಣಯಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊರೋನ ನಿಯಂತ್ರಣ, ಮಾರಿಕಾಂಬ ಜಾತ್ರೆ ಮುಂತಾದ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡುತ್ತಿದ್ದರು.