ಶಿವಮೊಗ್ಗ:
ಪದವಿ ತರಗತಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಪುಟಾಣಿಗಳಿಗೆ ಪಾಠ ಹೇಳಿದರು.
ಅವರಿಗೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ, ನಮ್ಮ ರಾಷ್ಟ್ರ ಪಕ್ಷಿ, ಪ್ರಾಣಿ, ಪ್ರಮುಖ ಬೆಟ್ಟ-ಗುಡ್ಡಗಳು, ನದಿ-ತೊರೆಗಳು, ಪುರಾತನ ಆಟಗಳ ಬಗ್ಗೆ ಮಾಹಿತಿ ನೀಡಿದರು.
ತಾವೇ ಸ್ವತ: ಪುಟಾಣಿಗಳ ಜತೆ ಚಿಕ್ಕ ಮಕ್ಕಳಾಗಿ ಆಟವಾಡಿ ತಮ್ಮ ಬಾಲ್ಯವನ್ನು ಮೆಲುಕು ಹಾಕಿದರು.
ಹೌದು. ಇದೆಲ್ಲ ನಡೆದಿದ್ದು ನಗರದ ಬೈಪಾಸ್ ರಸ್ತೆಯಲ್ಲಿರುವ ಸ್ಲಂ ಏರಿಯಾದ ಅಲೆಮಾರಿ ಜನಾಂಗದ ಟೆಂಟ್‌ನಲ್ಲಿ. ಮರದ ನೆರಳಿನ ಬಯಲು ಶಾಲೆಯಲ್ಲಿ. ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರು ನಿವೇದನಾ ಪ್ರತಿಷ್ಠಾನದ ಸಹಯೋಗದಲ್ಲಿ ನಿವೇದಿತಾ ಸಮಾಜ ಸೇವಾ ಇಂಟರ್ನಷಿಪ್‌ನ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಈ ವಿನೂತನ ಸನ್ನಿವೇಶ ಕಂಡುಬಂದದ್ದು ಸತ್ಯ.
ಅಲೆಮಾರಿ ಕುಟುಂಬದವರ ಸುಮಾರು 40 ಪುಟಾಣಿ ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಶಿಕ್ಷಣ, ಆಟ-ಪಾಠಗಳ, ಪರಿಸರ ರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಕುತೂಹಲಕಾರಿ ವಿಷಯಗಳ ಕುರಿತು ಈ ಸ್ವಯಂಸೇವಕಿಯರು ಆ ಚಿಕ್ಕ ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳೂ ಅಷ್ಟೇ ಆಸಕ್ತಿ, ಕುತೂಹಲಗಳಿಂದ ಇವರ ಪಾಠ ಆಲಿಸಿದರು. ಕೇಳಿದ ಪ್ರಶ್ನೆಗಳಿಗೆ ಸ್ಪಂದಿಸಿದರು. ಸ್ವಯಂಸೇವಕಿಯರು ಆಡಿಸಿದ ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಖುಷಿಯಿಂದ ಹಿಗ್ಗಿದರು, ಬೀಗಿದರು. ಶಿಸ್ತಿನ ಸಿಪಾಯಿಗಳಾಗಿ ಮೆರೆದರು. ಅಕ್ಕಾ ಮತ್ತೊಮ್ಮೆ ಬನ್ನಿ ಎಂದು ಕರೆಸಿಕೊಳ್ಳುವುದರ ಮೂಲಕ ಮತ್ತೆ ಈ ಸ್ವಯಂಸೇವಕಿಯರೊಡನೆ ಬೆರೆಯುವ ತವಕವನ್ನು ಆ ಪುಟಾಣಿಗಳು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಹಣ್ಣು-ಹಂಪಲು, ಚಾಕಲೇಟು ವಿತರಣೆ ಮಾಡಲಾಯಿತು.
ಕಮಲಾ ನೆಹರು ಮಹಿಳಾ ಕಾಲೇಜಿನ ಎನ್.ಎಸ್.ಎಸ್.ಘಟಕಗಳ ಸಾಮಾಜಿಕ ಕಾಳಜಿಯ ವಿನೂತನ ಪ್ರಯೋಗಕ್ಕೆ ಇದೂ ಒಂದು ಸಾಕ್ಷಿಯಾಯಿತು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ನಿವೇದಿತಾ ಪ್ರತಿಷ್ಠಾನದ ಹಿರಿಯ ಕಾರ್ಯಕರ್ತೆ ಶ್ರೀಮತಿ ಭಾಗೀರತಿಬಾಯಿ, ಹಿರಿಯ ಸ್ವಯಂಸೇವಕಿಯರಾದ ಕು.ನಾಗವೇಣಿ ಎನ್., ಲತಾ ಪಿ., ಆಶಾ ಪಿ.ಎಂ, ಸುಜ್ಞಾ, ಚಂದನಾಬಾಯಿ ಎಚ್. ದರ್ಶಿನಿ ಸಿ. ಮೊದಲಾದವರು ಈ ಸಂದರ್ಭದಲ್ಲಿದ್ದರು.