.ಶಿವಮೊಗ್ಗ, ಡಿ.೧೮:
ಭದ್ರಾವತಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬಿ.ಆರ್.ಎಲ್.ಬಿ.ಸಿ. ಕಾರ್ಯಪಾಲಕ ಅಭಿಯಂತರರ ವಿರುದ್ಧ ಗುತ್ತಿಗೆದಾರರೊಬ್ಬರು ಹಣ ಬಿಡುಗಡೆಗೆ ಶೇ.೨೦ರಷ್ಟು ಲಂಚ ಕೇಳುತ್ತಿರುವ ಬಗ್ಗೆ ಆರೋಪಿಸಿ ಜಿಲ್ಲಾ ಪಿಡಬ್ಲೂಡಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್‌ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಸೋಸಿಯೇಷನ್ ಕಾರ್ಯಪಾಲಕ ಅಭಿಯಂತರರು, ಮುಖ್ಯ ಅಭಿಯಂತರರು ಹಾಗೂ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಮನವಿ ಸಲ್ಲಿಸಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇಂದು ಬೆಳಗ್ಗೆ ಭದ್ರಾವತಿಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಸ್.ಧನಶೇಖರ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು, ಗುತ್ತಿಗೆದಾರ ಮಹೇಶ್ ಸಿ.ಹಾವೇರಿ ಅವರ ಬಿಲ್ಲಿನ ಹಣದ ಚೆಕ್ಕನ್ನು ತಡೆಹಿಡಿದಿರುವುದು ಸರಿಯಲ್ಲ. ಇದೇ ರೀತಿ ಬಹಳಷ್ಟು ಗುತ್ತಿಗೆದಾರರಿಂದ ಆರೋಪಗಳು ಕೇಳಿಬರುತ್ತಿವೆ. ಕೂಡಲೇ ಎಲ್ಲಾ ಗುತ್ತಿಗೆದಾರರ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮಹೇಶ್ ಅವರು ಬಿಆರ್‌ಪಿ-೧ ಉಪವಿಭಾಗದಲ್ಲಿ ಕ್ವಾಟ್ರಸ್ ದುರಸ್ಥಿ ಕಾಮಗಾರಿಗೆ ೬೬,೨೧,೩೫೭.೪೮ ರೂಗಳಿಗೆ ಟೆಂಡರ್ ಪಡೆದಿದ್ದು, ಕಾಮಗಾರಿಗಳನ್ನು ಮುಗಿಸಿರುತ್ತೇನೆ. ಉಪವಿಭಾಗ ವ್ಯಾಪ್ತಿಯಿಂದ ೨೫-೦೩-೨೦೨೧ಕ್ಕೆ ಎಸ್‌ಬಿಆರ್ ನಂ.೧೧೮ ಬಿಲ್ಲಿನ ಮೊತ್ತ ೫೭,೨೭,೨೬೪ ಆಗಿರುತ್ತದೆ. ಚೆಕ್ ನಂ.೭೧೮೭೫೮ರಲ್ಲಿ ೪೮,೬೯,೦೯೧ ರೂಗಳನ್ನು ೨೩-೧೧-೨೦೨೧ರಂದು ಬರೆದಿರುತ್ತಾರೆ.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರನ್ನು ಮೌಖಿಕವಾಗಿ ಭೇಟಿ ಮಾಡಿ ಚೆಕ್ ನೀಡಲು ವಿನಂತಿಸಿದಾಗ ಅವರು ಚೆಕ್‌ನ ಮೊತ್ತಕ್ಕೆ ಶೇ.೨೦ರಷ್ಟು ಕಮಿಷನ್ ನೀಡಿದರೆ ಮಾತ್ರ ಕೊಡುವುದಾಗಿ ತಡೆ ಹಿಡಿದಿದ್ದಾರೆ. ಹಣದ ಅವಶ್ಯಕತೆ ಅನಿವಾರ್ಯವಾಗಿದ್ದು, ಕೂಡಲೇ ಚೆಕ್ ಕೊಡಿಸುವಂತೆ ವಿನಂತಿಸಿದ್ದರು.