ಭದ್ರಾವತಿ, ಡಿ.18:
ಭದ್ರಾವತಿ ನಗರ ಸರ್ಕಲ್ ಇನ್ಸ್ ಸ್ಪೆಕ್ಟರ್ ಹಾಗೂ ಹಳೇನಗರ ಪೊಲೀಸರ ತಂಡ ಲಕ್ಷಾಂತರ ರೂ ಮೌಲ್ಯದ ನೂರಕ್ಕೂ ಹೆಚ್ಚು ಮೊಬೈಲ್ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಭದ್ರಾವತಿ ಮೊಬೈಲ್ ಚೋರರ ಭಾರೀ ದಂಧೆಯನ್ನು ಬಯಲಿಗೆಳೆದಿದೆ.
ಕಳ್ಳತನ ಮಾಡಿದ ಮೊಬೈಲ್ ಫೋನ್ ಗಳನ್ನು ಭದ್ರಾವತಿಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಈ ಖದೀಮರು ಸಿಕ್ಕಿಹಾಕಿಕೊಂಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಭದ್ರಾವತಿ ಎಎಸ್ ಪಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಹಾಗೂ ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೀಗೇಬಾಗಿಯ ಹತ್ತಿರ ಚನ್ನಗಿರಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ KA14EJ2989 ಡಿಯೋ ಬೈಕ್ ನಲ್ಲಿ ಇಬ್ಬರು ಬಗ್ಗೆ ಅನುಮಾನ ಬಂದು ಅವರನ್ನು ತಡೆದು ಪರಿಶೀಲನೆ ಮಾಡಿದಾಗ. ಪ್ರಕರಣ ಪತ್ತೆಯಾಗಿದೆ.
ಆರೋಪಿಗಳಾದ ಶ್ರೀನಿವಾಸ, 26 ವರ್ಷ, ಭೋವಿ ಕಾಲೋನಿ ಭದ್ರಾವತಿ ಮತ್ತು ಅಜಾಮ್ @ ಬಾಬು, 38 ವರ್ಷ, ದುರ್ಗಿನಗರ ಭದ್ರಾವತಿ ರವರ ಬಳಿ ಬಟ್ಟೆ ಬ್ಯಾಗ್ ನಲ್ಲಿದ್ದ ಅಂದಾಜು ಮೌಲ್ಯ 11,00,000/- ರೂ ಗಳ ಒಟ್ಟು 120 ಸಂಖ್ಯೆಯ ವಿವಿಧ ಕಂಪನಿಯ ಮೊಬೈಲ್ ಫೋನ್ ಗಳು, Dell ಕಂಪನಿಯ 1 ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0161/2021 ಕಲಂ 41(D),102 CRPC, 379 IPCರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಈ ತನಿಖೆಯಲ್ಲಿ ಸಿಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಸಿಬ್ಬಂದಿಗಳಾದ ಮಹೇಶ್ ನಾಯ್ಕ್, ವಿಜಯಕುಮಾರ್, ವೆಂಕಟೇಶ್, ಸುನಿಲ್ ಕುಮಾರ್, ನವೀನ್ ಪವಾರ್, ಅನಿಲ್, ಸ್ವಾಮಿ ಅವರ ತಂಡದ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಶ್ಲಾಘಿಸಿದ್ದಾರೆ.