ಶಿವಮೊಗ್ಗ: ಬಿಜೆಪಿ ಸರ್ಕಾರ ಯಾವ ಚರ್ಚೆ ಇಲ್ಲದೆ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ಖಾಸಗೀಕರಣಕ್ಕೆ ದಾರಿ ಮಾಡಿ ಕೊಡುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವಸರ ಅವಸರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಪಿಇ) ಜಾರಿಗೆ ತರಲು ಹೊರಟಿದೆ. ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರು ಇದರ ಅಧಿಕೃತ ಉದ್ಘಾಟನೆಯನ್ನು ಕೂಡ ಮಾಡಿದ್ದಾರೆ. ಆದರೆ ಇದರಲ್ಲಿರುವ ಲೋಪದೋಷಗಳನ್ನು ಹಾಗೆ ಇಟ್ಟು ಮುಚ್ಚಿದ ಲಗೋಟೆಯಲ್ಲಿ ಬಚ್ಚಿಟ್ಟು ಜಾರಿಗೆ ತರಲು ಹೊರಟಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರಿಂದ ಶಿಕ್ಷಣ ದಿಂದ ವಂಚಿತರಾದ ಮಕ್ಕಳು ಮತ್ತೆ ಶಿಕ್ಷಣ ವನ್ನು ಮುಂದುವರೆಸಲು ಆಗುವುದೇ ಇಲ್ಲ. ಯಾವ ಕ್ಷೇತ್ರ ಖಾಸಗೀಕರಣವಾಗಬಾರದು ಎಂದು ಬಹುಜನರ ಆಪೇಕ್ಷೆಯಾಗಿತ್ತು. ಅಂತಹ ಶಿಕ್ಷಣ ಕ್ಷೇತ್ರ ಈ ಹೊಸ ಕಾಯ್ದೆಯಿಂದ ಮತ್ತಷ್ಟು ಪಾತಳಕ್ಕೆ ಇಳಿಯಲಿದೆ ಎಂದು ಆರೋಪಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗ ಬೇಕು ಎಂಬುದು ಒಪ್ಪುವ ವಿಷಯ. ಆದರೆ, ಭಾರತ ದಂತಹ ದೇಶದಲ್ಲಿ ಯಾವುದೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾದರೆ ಅದರ ಸುದೀರ್ಘ ಚರ್ಚೆಯಾಗಬೇಕು. ಜನಾಭಿಪ್ರಾಯ ಕೇಳಬೇಕು. ಲೋಕಸಭೆ, ರಾಜ್ಯಸಭೆ, ವಿಧಾನ ಸಭೆಗಳಲ್ಲಿ ಚರ್ಚೆಯಾಗಬೇಕು. ಆದರೆಈ ಹೊಸ ನೀತಿ ಎಲ್ಲಿಯೂ ಚರ್ಚೆ ಆಗಲಿಲ್ಲ. ಇದನ್ನು ಏಕಾಏಕಿ ಜಾರಿಗೊಳಿಸಿ ಅನುಷ್ಠಾನಕ್ಕೆ ತರಲು ಹೊರಟಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಅಷ್ಟಕ್ಕೂ ಈ ಶಿಕ್ಷಣ ನೀತಿ ಜಾರಿಗೆ ತರಲು ಕಸ್ತೂರಿ ರಂಗನ್‌ನಂತಹ ವಿಜ್ಞಾನಿಗಳನ್ನು ನೇಮಿಸಲಾಗಿತ್ತು. ಈ ಸಮಿತಿಯಲ್ಲಿ ಇದ್ದವರು ಸಂಘ ಪರಿವಾರದ ಸದಸ್ಯರು. ಎಲ್ಲಾ ಬಿಜೆಪಿ ನವರೇ ತುಂಬಿಕೊಂಡಿದ್ದರು. ಇತರೆಯವರು ಈ ಸಮಿತಿಯಲ್ಲಿ ಇರಲಿಲ್ಲ. ಸನಾತನ ವಿಷಯ ಗಳ ವಿಜ್ರಂಬಿಸುವ ವರ್ತಮಾನಕ್ಕೆ ಸ್ಪಂದಿಸದ ಭವಿಷ್ಯತ್ ರೂಪಿಸಿದ ಒಟ್ಟಾರೆ ಪೂರ್ವ ಸಿದ್ಧತೆ ಇಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ಇದು. ಇದರ ಲ್ಲಿರುವ ಲೋಪದೋಷಗಳನ್ನು ಸರಿಮಾಡದ ಹೊರತು ಇದು ಜಾರಿಯಾಗಬಾರದು ಎಂದರು.
ಈ ಶಿಕ್ಷಣ ನೀತಿಯಿಂದ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹು ಸಂಸ್ಕೃತಿಯ ನಾಶವಾಗುತ್ತದೆ. ಇಡೀ ಶಿಕ್ಷಣ ಖಾಸಗಿಗಳ ವಶವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ೩ರಿಂದ ೧೮ವರ್ಷದವರೆಗಿನ ವೆಚ್ಚವನ್ನು ಸರ್ಕಾರಕ್ಕೆ ಭರಿಸಬೇಕು. ಆದರೆ ಈ ಹೊಸ ನೀತಿಯಿಂದ ಖಾಸಗಿ ಕ್ಷೇತ್ರಗಳು ಹೆಚ್ಚಾಗಿ ಬಡ ಮಕ್ಕಳು ಓದುವುದೇ ಕಷ್ಟವಾಗುತ್ತದೆ. ಬರಿ ಶ್ರೀಮಂತರಿಗಾಗಿ ಶಾಲೆಗಳು ತೆರೆಯುತ್ತವೆ ಎಂದರು.
ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಸದನದಲ್ಲಿಯೂ ಕಾಂಗ್ರೆಸ್ ಧ್ವನಿ ಎತ್ತಲಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ಇದು ಜಾರಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಎನ್.ರಮೇಶ್, ದೇವಿಕುಮಾರ್, ಯಮುನಾರಂಗೇಗೌಡ, ರಂಗೇಗೌಡ, ರಾಘವೇಂದ್ರ ಮತ್ತಿತರರು ಇದ್ದರು.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಏಕವಚನದಲ್ಲಿ ಕರೆದಿಲ್ಲ. ಇದೆಲ್ಲಾ ಕೆಲವರ ಸೃಷ್ಠಿ ಕಿಮ್ಮನೆ ಹೇಳಿದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಆರ್.ಎಂ.ಮಂಜುನಾಥಗೌಡರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರ ವಿರುದ್ಧ ಹರಿಹಾಯ್ದರು.
ದುಡ್ಡಿನ ಚೀಲ ಹಿಡಿದುಕೊಂಡು ಪಕ್ಷ ಸೇರಿದವರು ಇಂತಹ ಕಿತಾಪತಿ ಮಾಡುತ್ತಾರೆ. ಇದರಿಂದ ತಮಗೆ ಲಾಭವಾಗಬಹುದು ಎಂಬ ಭ್ರಮೆಯಲಿರುತ್ತಾರೆ. ಅದು ಸಾಧ್ಯವಾಗದಿದ್ದಾಗ ಸುಮ್ಮನಾಗುತ್ತಾರೆ. ನಾನು ಸರಳ ರಾಜಕಾರಣಿ. ಅಧಿಕಾರ ಸೇರಿದಂತೆ ಯಾವ ಲಾಭದ ಆಸೆಯಿಂದ ಈ ಪಕ್ಷಕ್ಕೆ ಬಂದವನಲ್ಲ. ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್‌ನಲ್ಲಿದ್ದೇವೆ. ಮುಂದೆಯೂ ಇರುತ್ತೇವೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನನಗೆ ವಿಧಾನಸಭಗೆ ಸ್ಪರ್ಧಿಸಲು ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡಿಗೆ ಬಿಟ್ಟದು. ನನಗೆ ಸಿಗುತ್ತದೆ ಎಂದು ಹೇಳಿಕೊಂಡು ತಿರುಗಾಡುವವರಿಗೆ ನಾನೇನು ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.