ಶಿವಮೊಗ್ಗ, ಆ,29: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಗರದ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ನೇಪಾಳದಲ್ಲಿ ನಿಮ್ಮ

ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ, ಸಾರ್ವಜನಿಕರು ನಾಪತ್ತೆಯಾದ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಮತ್ತು ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ಸರ್ಕಾರಕ್ಕೆ ತಕ್ಷಣವೇ ಒದಗಿಸಲು ಕೋರಲಾಗಿದೆ.

ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) 24×7 ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು 1070 (ಟೋಲ್ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. ಇಮೇಲ್ ಮೂಲಕ ಮಾಹಿತಿ ನೀಡಲು seockarnataka@gmail.com ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.