ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದಲ್ಲಿ ಐದು ಹಸುಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಕುಂಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮಡಿಹಳ್ಳಿ ಗ್ರಾಮದ ಶಂಕರ್ ಎಂಬುವವರಿಗೆ ಸೇರಿದ ಜಮೀನಿನ ಶೆಡ್ನಲ್ಲಿ ಕಟ್ಟಿಹಾಕಿದ್ದ ಐದು ಹಸುಗಳನ್ನು ನವೆಂಬರ್ 14ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಹಾಗೂ ಶಿವಮೊಗ್ಗ-ಬಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ ಬಸವರಾಜ್ ಪಿ.ಎಸ್. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ವಿಶೇಷ ತಂಡವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಬಂಧಿತ ಆರೋಪಿಗಳನ್ನು ಆಯನೂರು ಗ್ರಾಮದ ಅಬ್ದುಲ್ ಸಾಧಿಕ್ (25), ಶಿವಮೊಗ್ಗ ನಗರದ ರಾಗಿಗುಡ್ಡದ ಶಫೀವುಲ್ಲಾ (49), ಊರುಗಡೂರಿನ ಎಂ. ಸಯ್ಯದ್ ನವೀದ್ (30), ಆಯನೂರು ಕೋಹಳ್ಳಿ ಗ್ರಾಮದ ಸೈಯದ್ ಯಾಸೀನ್ (29) ಹಾಗೂ ಆಯನೂರು ಗ್ರಾಮದ ನಯಾಜುಲ್ಲ (30) ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ವಿಚಾರಣೆ ನಡೆಸಿದಾಗ ತಮ್ಮಡಿಹಳ್ಳಿ ಗ್ರಾಮದಲ್ಲಿ ಐದು ಹಸುಗಳನ್ನು ಕಳ್ಳತನ ಮಾಡಿರುವುದರ ಜೊತೆಗೆ, ಕಳೆದ ಏಪ್ರಿಲ್ ತಿಂಗಳಲ್ಲಿ ಚನ್ನಳ್ಳಿ ಗ್ರಾಮದಲ್ಲಿ ಒಂದು ಎತ್ತನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಚನ್ನಳ್ಳಿ ಎತ್ತು ಕಳ್ಳತನ ಪ್ರಕರಣವೂ ಈ ಹಿಂದೆ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ಹಾಗೂ ಕಳವು ಮಾಡಿದ ಹಸುಗಳನ್ನು ಮಾರಾಟ ಮಾಡಿದ್ದರಿಂದ ಬಂದಿದ್ದ ₹56,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಿದ್ದಾರೆ.

ಪೊಲೀಸ್ ತಂಡಕ್ಕೆ ಅಭಿನಂದನೆ: ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಕಳುವಾದ ಮಾಲು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ಪಾರ್ವತಿಬಾಯಿ, ಸಿಬ್ಬಂದಿಗಳಾದ ಪ್ರಕಾಶ್, ಶಶಿಧರ್, ಮಂಜುನಾಥ್, ಬುರಾನ್ ದೀನ್ ಗಡೇಕಾರ್, ಶಿವಪ್ಪ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಮತ್ತು ಇಂದ್ರೇಶ್ ಪಾಲ್ಗೊಂಡಿದ್ದರು.