ಶಿವಮೊಗ್ಗ: ಪೋಷಕರೊಂದಿಗೆ ಮುನಿಸಿಕೊಂಡು ಮನೆ ತೊರೆದು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ಕುಳಿತಿದ್ದ ಯುವತಿಯನ್ನು ಅಕ್ಕಪಡೆ ಸಿಬ್ಬಂದಿ ಪತ್ತೆಹಚ್ಚಿ, ಆಕೆಗೆ ಆಪ್ತ ಸಮಾಲೋಚನೆ ನಡೆಸಿ ಪೋಷಕರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ.

ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಅಕ್ಕಪಡೆ ಸಿಬ್ಬಂದಿಗೆ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ಒಂಟಿಯಾಗಿ ಕುಳಿತಿರುವ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಯುವತಿಯನ್ನು ವಿಚಾರಿಸಿದಾಗ, ಪೋಷಕರು ಬೈದಿದ್ದರಿಂದ ಬೇಸರಗೊಂಡು ಮನೆ ಬಿಟ್ಟು ಬಂದಿರುವುದು ತಿಳಿದುಬಂದಿದೆ.

ಯುವತಿಯನ್ನು ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆತಂದು ಆಪ್ತ ಸಮಾಲೋಚನೆ ನಡೆಸಿದ ಸಿಬ್ಬಂದಿ, ಆಕೆಗೆ ಧೈರ್ಯ ತುಂಬಿ ಕುಟುಂಬದವರೊಂದಿಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತಿಳಿವಳಿಕೆ ನೀಡಿದರು.

ಬಳಿಕ ಪೋಷಕರನ್ನು ಠಾಣೆಗೆ ಕರೆಸಿ ಅವರೊಂದಿಗೂ ಸಮಾಲೋಚನೆ ನಡೆಸಿ, ಯುವತಿ ಹಾಗೂ ಪೋಷಕರ ನಡುವೆ ಮಾತುಕತೆ ನಡೆಸಲಾಯಿತು. ನಂತರ ಯುವತಿಯನ್ನು ಪೋಷಕರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.

ಸಂಕಷ್ಟದಲ್ಲಿದ್ದ ಯುವತಿಗೆ ಸಮಯಕ್ಕೆ ಸರಿಯಾಗಿ ನೆರವಾಗಿ, ಕುಟುಂಬದೊಂದಿಗೆ ಮತ್ತೆ ಸೇರಿಸಿದ ಅಕ್ಕಪಡೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.