ಶಿವಮೊಗ್ಗ: ನಗರದ ಸೈನ್ಸ್ ಮೈದಾನದ ಆವರಣದಲ್ಲಿ ಸುಮಾರು 18 ವರ್ಷಗಳಿಂದ ಬೆಳೆದು ನಿಂತಿದ್ದ 24 ಮರಗಳನ್ನು ಕಡಿತಗೊಳಿಸಿರುವ ಘಟನೆ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳ ಕಡಿತಕ್ಕೆ ಕಾರಣರಾದ ಕಾಲೇಜಿನ ಎಸ್ಡಿಎಂಸಿ ಹಾಗೂ ಸಂಬಂಧಪಟ್ಟ ಅರಣ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪರಿಸರವಾದಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸುಮಾರು 18 ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನು ಕಡಿತಗೊಳಿಸಲು ಅನುಮತಿ ನೀಡಿದವರು ಯಾರು, ಯಾವ ಕಾರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಯಿತು ಹಾಗೂ ನಿಯಮಾನುಸಾರ ಅಗತ್ಯ ಅನುಮತಿ ಪಡೆಯಲಾಗಿತ್ತೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು
.

ನಗರದ ಪರಿಸರ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಹಸಿರು ಸಂಪತ್ತಿನ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಆದ್ಯತೆ ನೀಡಬೇಕು. ಕಡಿತಗೊಳಿಸಿರುವ ಮರಗಳಿಗೆ ಪರ್ಯಾಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು, ಅವುಗಳ ನಿರಂತರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೆ.ಈ. ಕಾಂತೇಶ್, ಶ್ರೀಕಾಂತ್, ವಸಂತ ಕುಮಾರ್, ಶ್ರೀಪತಿ, ಶೇಖರ್ ಗೌಳಿಯರ್, ಅಶೋಕ್ ಕುಮಾರ್, ಜನಾರ್ಧನ ಪೈ, ಕೆ.ವಿ. ಸುಬ್ಬಣ್ಣ ಹಾಗೂ ನಾಗೇಶ್ ಉಪಸ್ಥಿತರಿದ್ದರು.