



ಹೊಳೆಹೊನ್ನೂರು,ಆ.04:
ಜಗಳದ ವೇಳೆ ಮಂಜುನಾಥ ನಾಯ್ಕ ತನ್ನ ತಂದೆಯ ಕುತ್ತಿಗೆಯನ್ನು ಕೈಗಳಿಂದ ಬಿಗಿಯಾಗಿ ಹಿಸುಕಿದ ಪರಿಣಾಮ ಶಿವಗ ನಾಯ್ಕ ಎಂಬುವರು ಉಸಿರಾಟದ ತೊಂದರೆಯಿಂದ ನೆಲಕ್ಕುರುಳಿರುವ ಘಟನೆ ನಡೆದಿದೆ.
ಕುಡಿದ ಅಮಲಿನಲ್ಲಿ ಕುಟುಂಬಸ್ಥರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದ ವ್ಯಕ್ತಿಯನ್ನು ಆತನ ಮಗನೇ ಕತ್ತುಹಿಸುಕಿ ಕೊಂದಿರುವ ಈ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಅರಶಿನಘಟ್ಟದಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಶಿವಗನಾಯ್ಕ (55) ಎಂದು ಗುರುತಿಸಲಾಗಿದ್ದು, ಆರೋಪಿ ಪುತ್ರನನ್ನು ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಅರಶಿನಗಟ್ಟ
ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ಸಂಬಂಧಿಕರಾದ ಮಹೇಶ್ ನಾಯ್ಕ ಹಾಗೂ ಕೀರ್ಯಾ ನಾಯ್ಕ ಅವರು ಇಬ್ಬರನ್ನು ಬೇರ್ಪಡಿಸಿದ್ದಾರೆ. ಬಳಿಕ ಶಿವಗನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ಅವರು ಪ್ರಜ್ಞೆ ತಪ್ಪಿದ್ದು, ಪರಿಶೀಲಿಸಿದಾಗ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.

ಪತ್ನಿಯಿಂದಲೇ ಪುತ್ರನ ವಿರುದ್ಧ ದೂರು
ಘಟನೆಯ ಬಳಿಕ ಮೃತನ ಪತ್ನಿ ಪಾರ್ವತಿ ಬಾಯಿ (51) ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪುತ್ರ ಮಂಜುನಾಥ ನಾಯ್ಕನೇ ತನ್ನ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲು – ತನಿಖೆ ಮುಂದುವರಿಕೆ
ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 211/2026ರಡಿ ಭಾರತೀಯ ನ್ಯಾಯ ಸಂಹಿತೆ ಕಲಂ 103(1) ಅನ್ವಯ ಪ್ರಕರಣ ದಾಖಲಾಗಿದೆ.

ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಇನ್ನಷ್ಟು ಸ್ಪಷ್ಟವಾಗಲಿದೆ.
ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರೆಸಿದ್ದಾರೆ.
