ಶಿವಮೊಗ್ಗ: ಕರ್ನಾಟಕ ಸರ್ಕಾರ ಹಾಗೂ ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ “ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿಯ ಪಿಳ್ಳಂಗಿರಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಿತು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಗ್ರಾಮಗಳ ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದರು.

ಸರ್ಕಾರದ ವಿವಿಧ ಇಲಾಖೆಗಳ ಸೇವೆ ಹಾಗೂ ಜನಪರ ಯೋಜನೆಗಳನ್ನು ಗ್ರಾಮೀಣ ಭಾಗದ ಜನರ ಮನೆಬಾಗಿಲಿಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂತಹ ಜನಸಂಪರ್ಕ ಸಭೆಗಳು ಮಹತ್ವದ ಪಾತ್ರ ವಹಿಸುತ್ತವೆ.

ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಮನವಿಗಳು ಹಾಗೂ ಅಹವಾಲುಗಳ ಕುರಿತು ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವುದು, ಬಾಕಿ ಇರುವ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರಿ ಯೋಜನೆಗಳ ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಮಾನವೀಯತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂಬ ಆಶಯವನ್ನು ಶಾಸಕರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.