ಶಿವಮೊಗ್ಗ, ಅ, 31
ಕೃಷಿ ಮೇಳಕ್ಕೆ ಲಕ್ಷಾಂತರ ರೈತರು, ಮಹಿಳೆಯರು ಹಾಗೂ ಯುವಕರು ಭಾಗವಹಿಸುತ್ತಿರುವುದು ಮೇಳದ ಬೃಹತ್ ಯಶಸ್ಸಿಗೆ ಸಾಕ್ಷಿಯಾಗಿದ್ದು, ಮೇಳದಲ್ಲಿ ರೈತರು ಬರ ನಿರ್ವಹಣೆ, ಆಧುನಿಕ ಕೃಷಿ ಪದ್ದತಿ ಬಗ್ಗೆ ಮಾಹಿತಿ ಪಡೆದು ಅಳವಡಿಸಿಕೊಳ್ಳಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಅ.31 ರಿಂದ ನ.2 ರವರೆಗೆ ಆಯೋಜಿಸಲಾಗಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026

ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ರೈತರ ಯಶೋಗಾಥೆ, ಡಿಜಿಟಲ್ ಕೃಷಿ ಪುಸ್ತಕ ಮತ್ತು ಕೃಷಿ ಆಪ್ಸ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
600 ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸುವ ಮೂಲಕ ಬೃಹತ್ ಕೃಷಿ ಮತ್ತು ತೋಟಗಾರಿಕಾ ಮೇಳ ಆಯೋಜಿಸಿದ್ದು 5-6 ಲಕ್ಷ ಜನ ಭೇಟಿ ನೀಡುತ್ತಿದ್ದು, ಮೇಳದ ಯಶಸ್ಸಿಗೆ ಜನರೇ ಸಾಕ್ಷಿಯಾಗಿದ್ದಾರೆ.
ಈ ವಿಶ್ವವಿದ್ಯಾಲಯದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಬರುವ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು.
1990ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರು ಈ ಕೃಷಿ ವಿಶ್ವವಿದ್ಯಾಲಯವನ್ನು ಆರಂಭಿಸಿದ್ದರು. ಬೆಂಗಳೂರು ಮತ್ತು ಧಾರವಾಡದ ನಂತರ ರಾಜ್ಯದಲ್ಲಿರುವ ಮೂರನೇ ದೊಡ್ಡ ಕೃಷಿ ವಿಶ್ವವಿದ್ಯಾಲಯ ಇದಾಗಿದೆ.

ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕಾಗಿಇರುವಕ್ಕಿಯಲ್ಲಿ 787 ಎಕರೆ ಜಮೀನನ್ನು ಒದಗಿಸಿ, ಸುಮಾರು 150 ಕೋಟಿ ರೂಪಾಯಿಗಳ ಹಣದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಅವರ ಈ ಸಾಧನೆ ಮತ್ತು ಇತರೆ ಹೋರಾಟವನ್ನು ಸ್ಮರಿಸುತ್ತಾ ಅವರಿಗೆ ರಾಜ್ಯೋತ್ಸವದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ.
ರೈತರಿಗೆ ಉಚಿತ ವಿದ್ಯುತ್ ಯೋಜನೆ: 1990ರಲ್ಲಿ ಬಂಗಾರಪ್ಪನವರು ರೈತರಿಗೆ ಉಚಿತವಾಗಿ ಪಂಪ್ಸೆಟ್ಗಳಿಗೆ ಕರೆಂಟ್ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು. ಪ್ರಸ್ತುತ ಸರ್ಕಾರವು ಎಲ್ಲಾ ರೈತರ ಪ್ರಾಂತಗಳಲ್ಲಿ 10 ಎಚ್ಪಿ ವರೆಗೂ ಉಚಿತ ಕರೆಂಟ್ ನೀಡುವ ವ್ಯವಸ್ಥೆಯನ್ನು ಮಾಡಿದೆ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲುರೂ. 30ಸಾವಿರ ಕೋಟಿ ಸರ್ಕಾರ ರೈತರ ಪರವಾಗಿ ಭರಿಸುತ್ತಿದೆ.
ಜಿಲ್ಲೆಯಲ್ಲಿ 14,000 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ ಇಂದು ಸುಮಾರು 1,48,000 ಹೆಕ್ಟೇರ್ಗೆ ವಿಸ್ತರಿಸಲಾಗಿದೆ ಎಂದರು.
ಕರ್ನಾಟಕ ಸರ್ಕಾರವು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಕೃಷಿ ಮತ್ತು ಸಂಸ್ಕೃತಿಯ ಪ್ರತ್ಯಕ್ಷ ಅನುಭವ ನೀಡಲು ‘ಗ್ರಾಮಾನುಭವ’ ಯೋಜನೆಯನ್ನು ಜಾರಿಗೆ ತಂದಿದ್ದು ಕನ್ನಡ ರಾಜ್ಯೋತ್ಸವದಂದು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡುವರು ಎಂದು ತಿಳಿಸಿದರು.
ಮುಜರಾಯಿ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೆ ಎಸ್ ಬಸವಂತಪ್ಪ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ಮೂಲಕ ರೈತರ ಜೀವನೋಪಾಯವನ್ನು ಸುಧಾರಿಸಲು ಮತ್ತು ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸಲು ಸರ್ಕಾರ ಹಾಗೂ ವಿಜ್ಞಾನಿಗಳು ಜಂಟಿಯಾಗಿ ಶ್ರಮಿಸಬೇಕಿದೆ.
ಮಳೆಯ ಅಭಾವದಿಂದ ಎದುರಾಗಿರುವ ಭೀಕರ ಬರವನ್ನ ಎದುರಿಸಲು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ನೀಡುವ ಪರ್ಯಾಯ ಬೆಳೆಗಳ ಸಂಶೋಧನೆ ಹಾಗೂ ಪ್ರಚಾರ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.
ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ: ಕೃಷಿ ಮೇಳದ ಎರಡನೇ ದಿನದಂದು ಗ್ರಾಮೀಣ ಭಾಗದ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿ ಮತ್ತು ಸಂಶೋಧನಾ ಮಾಹಿತಿಯನ್ನು ವೀಕ್ಷಿಸುತ್ತಿದ್ದಾರೆ.ಮಹಿಳೆಯರ ಈ ಆಸಕ್ತಿಯು ಕೃಷಿ ಕ್ಷೇತ್ರಕ್ಕೆ ಹೊಸ ಗೌರವ ತಂದಿದೆ ಎಂದು ಶ್ಲಾಘಿಸಿದರು.
ಸಾವಯವ ಕೃಷಿಗೆ ಒತ್ತು: ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದ್ದು, ವಿಷಪೂರಿತ ಆಹಾರ ಉತ್ಪಾದನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಸಾವಯವ ಕೃಷಿಯತ್ತ ಮನಸ್ಸು ಮಾಡಬೇಕು ಮತ್ತು ವಿಜ್ಞಾನಿಗಳು ತಯಾರಿಸಿದ ಸಂಶೋಧನೆಗಳನ್ನು ಪ್ರತಿಯೊಂದು ಗ್ರಾಮ ಮಟ್ಟಕ್ಕೂ ತಲುಪಿಸಬೇಕು ಎಂದು ಮನವಿ ಮಾಡಿದರು.
ಓದಿದ ಯುವಕ-ಯುವತಿಯರು ನಗರಗಳಿಗೆ ತೆರಳಿ ಕಡಿಮೆ ವೇತನಕ್ಕೆ ಉದ್ಯೋಗ ಮಾಡುವ ಬದಲು, ಸ್ವಂತ ಜಮೀನಿನಲ್ಲಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದರು.

ರೈತರಿಗೆ ನೆರವಾಗಲು ಸರ್ಕಾರವು ಬಿತ್ತನೆ ಕಾರ್ಯಕ್ಕೆ ಹಣಕಾಸಿನ ನೆರವು ನೀಡುವ ನೇಗಿಲ ಯೋಗಿ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರು ಕೊಯ್ಲು ಹಾಗೂ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ (ಸಂಯೋಜಿತ ಕೃಷಿ) ಮಾಡುವ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸಲು ಮೀನುಗಾರಿಕೆ ಇಲಾಖೆಯಿಂದ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ರು.

ಕಾಗೋಡು ತಿಮ್ಮಪ್ಪನವರ ಕೊಡುಗೆ ಸ್ಮರಣೆ: ಕಾಗೋಡು ತಿಮ್ಮಪ್ಪನವರ ಹೋರಾಟ ಹಾಗೂ ಕೊಡುಗೆಯಿಂದಾಗಿ ಇಂದು ನೂರಾರು ಎಕರೆ ಜಮೀನು ಹಾಗೂ ನೂರಾರು ಕೋಟಿ ಅನುದಾನದೊಂದಿಗೆ ಅಡಿಕೆ ನಾಡಿನಲ್ಲಿ ಈ ಬೃಹತ್ ಕೃಷಿ ವಿಶ್ವವಿದ್ಯಾಲಯ ರೂಪುಗೊಂಡಿದೆ. ರೈತರ ಮತ್ತು ಅರಣ್ಯ ಭೂಮಿ ಉಳುಮೆದಾರರ ಹಕ್ಕುಗಳಿಗಾಗಿ ಹೋರಾಡಿದ ಅವರಿಗೆ ಪದ್ಮಶ್ರೀ ಯಂತಹ ಸೂಕ್ತ ಗೌರವ ಸಲ್ಲಿಕೆಯಾಗಬೇಕು ಎಂದು ಪ್ರತಿಪಾದಿಸಿದರು.
ಕುಲಸಚಿವರಾದ ಡಾ.ಶಾಮರಾವ ಜಹಾಗೀರದಾರ ಸ್ವಾಗತ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಜಿ.ಸಿ.ಮಧುಸೂದನ್
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್,
ಶಿವಮೊಗ್ಗ ಕುಲಪತಿಗಳಾದ ಡಾ. ಎಮ್. ವಿ. ಧನಂಜಯ, ಕೃಷಿಕ ಸಮಾಜದ ಅಧ್ಯಕ್ಷ ನಗರ ಮಹಾದೇವಪ್ಪ
ಪ್ರಗತಿಪರ ರೈತರು ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ದೇವಿಕುಮಾರ್ ಶಶಾಂಕ್, ಉದ್ದಿಮೆದಾರ ಯೋಗೇಶ್ವರ್, ಶಿಕ್ಷಣ ತಜ್ಞರು,
ಡಾ.ಬಸವರಾಜ್ ಶಿಕ್ಷಣ. ನಿರ್ದೇಶಕರು, ವಿಜ್ಞಾನಿಗಳಯ, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.