ಶಿವಮೊಗ್ಗ,ನ.3:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಒಂಬತ್ತನೇ ಪರಿಚ್ಛೇದದ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ನಾಗಮೋಹನ್ದಾಸ್ ಆಯೋಗದ ವರದಿ ಆಧರಿಸಿ ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಆದರೆ, ಅ. 12ರಂದು ಹೈಕೋರ್ಟ್ ಈ ಹೆಚ್ಚಳವನ್ನು ರದ್ದುಗೊಳಿಸಿರುವುದು ಸಮುದಾಯಗಳಿಗೆ ಹಿನ್ನಡೆಯಾಗಿದೆ ಎಂದರು.
ಮೀಸಲಾತಿ ಹೆಚ್ಚಳಕ್ಕೆ ಕಾನೂನು ರಕ್ಷಣೆ ಒದಗಿಸುವುದು ಸೇರಿದಂತೆ ದಲಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ನ. 6ರಂದು ಬೆಳಿಗ್ಗೆ 10.30ಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪೆÇ್ರ. ಬಿ. ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಅವರ ಜನ್ಮದಿನ ಜೂನ್ 9ನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ನಿವೇಶನ ರಹಿತರಿಗೆ ನಿವೇಶನ, ವಸತಿರಹಿತರಿಗೆ ಮನೆ ಒದಗಿಸಬೇಕು. ಬಗರ್ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಎಸ್ಸಿಎಸ್ಪಿ/ಟಿಎಸ್ಪಿ ಅನುದಾನದ ದುರ್ಬಳಕೆ ತಡೆಯಬೇಕು ಎಂದು ಆಗ್ರಹಿಸಿದರು.
ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು. ವಿವಿಧ ನಿಗಮಗಳ ಯೋಜನೆಗಳಿಗೆ ಬಾಕಿ ಇರುವ ಅರ್ಜಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ, ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ದೇವದಾಸಿ ಹಾಗೂ ವಿಧವಾ ಮಹಿಳೆಯರ ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು. ವಿದ್ಯಾರ್ಥಿಗಳ ಹಾಸ್ಟೆಲ್ ಭೋಜನ ವೆಚ್ಚವನ್ನು ₹3 ಸಾವಿರಕ್ಕೆ ಏರಿಸಬೇಕು ಸೇರಿದಂತೆ 15 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ಬೊಮ್ಮನಕಟ್ಟೆ ಕೃಷ್ಣ, ಸಾಗರದ ಹಿರಿಯ ಹೋರಾಟಗಾರ ಮಂಡಗಳಲೆ ನಾರಾಯಣ, ತಾಲೂಕು ಸಂಚಾಲಕ ರಮೇಶ್ ಚಿಕ್ಮರಡಿ, ನಗರ ಸಂಚಾಲಕ ಹರಿಗೆ ರವಿ, ಸೊರಬ ತಾಲೂಕು ಸಂಚಾಲಕ ಹಸ್ವಿ ಬಸವರಾಜ್, ಅತ್ತಿಗುಂದ ಕರಿಯಪ್ಪ ಮತ್ತು ಗೋಪಿ, ಚಂದ್ರಪ್ಪ, ಯಡವಾಲ ಹನುಮತಪ್ಪ, ಬಸಪ್ಪ, ರಾಜಶೇಖರ ಇದ್ದರು.