ಶಿವಮೊಗ್ಗ : ಮಲ್ಲಿಗೇನಹಳ್ಳಿಯಲ್ಲಿರುವ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಸಂಪರ್ಕ ಬಸ್ಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದು, ತಕ್ಷಣವೇ ೬ ಬಸ್ಗಳನ್ನು ಓಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಇಂದು ಕೆಎಸ್ಆರ್ಟಿಸಿ ಶಿವಮೊಗ್ಗ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಎಬಿವಿಪಿ ನಗರ ಸಹ ಕಾರ್ಯದರ್ಶಿ ವಿನಯ್ ಹಿರೇಮಲ್ಲ ಅವರು, “ಶಿವಮೊಗ್ಗದ ಮಲ್ಲಿಗೇನಹಳ್ಳಿಯಲ್ಲಿರುವ ಡಿ. ದೇವರಾಜ ಅರಸು ವಿದ್ಯಾರ್ಥಿ ನಿಲಯಗಳು ಬಿಸಿಡಬ್ಲ್ಯೂಡಿ-೨೩೭೬, ಬಿಸಿಡಬ್ಲ್ಯೂಡಿ-೨೩೭೯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೂರಾರು ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಆದರೆ ಕಾಲೇಜು ಮತ್ತು ನಗರ ಕೇಂದ್ರಕ್ಕೆ ಹೋಗಲು ಸರಿಯಾದ ಬಸ್ ಸಂಪರ್ಕವೇ ಇಲ್ಲ” ಎಂದು ತಿಳಿಸಿದರು.

ಬಸ್ಗಳು ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ತರಗತಿಗೆ ತಡವಾಗಿ ಹೋಗುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಬಸ್ ಹತ್ತಲೂ ಆಗುತ್ತಿಲ್ಲ. ಪರೀಕ್ಷಾ ಸಮಯದಲ್ಲಿ ಇನ್ನೂ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಅವರು ದೂರಿದರು.
ಮಲ್ಲಿಗೇನಹಳ್ಳಿ ಮಾರ್ಗಕ್ಕೆ ೬ ಬಸ್ಗಳನ್ನು ತಕ್ಷಣವೇ ಹೆಚ್ಚಿಸಬೇಕು. ಬಸ್ಗಳು ನಿಗದಿತ ಸಮಯಕ್ಕೆ ಬರುವಂತೆ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಸಮಯದಲ್ಲಿ ವಿಶೇಷ ಬಸ್ಗಳನ್ನು ಓಡಿಸಬೇಕು. ಈ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಎಬಿವಿಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿನಯ್ ಹಿರೇಮಲ್ಲ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಅಂಜನ್, ಸಾಮಾಜಿಕ ಜಾಲತಾಣ ಸಹ ಸಂಚಾಲಕ ಆಕಾಶ್ ಜೈನ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.