ಶಿವಮೊಗ್ಗ: ಕರ್ನಾಟಕ ಸರ್ಕಾರದ ಸ್ಯಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಸೆ.11 ರಿಂದ 18 ರವರೆಗೆ ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಭವನದಲ್ಲಿ ಸಾಬೂನು ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಎಂಡಿ ಗಂಗಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸಾಬೂನ್ ಸಂಸ್ಥೆಯು ಮೈಸೂರು ಸ್ಯಾಂಡಲ್ ಎಂದೆ ವಿಶ್ವ ವಿಖ್ಯಾತಿ ಪಡೆದಿದೆ. ಈ ಸಂಸ್ಥೆಯ ಸಾಬೂನು, ಅಗರಬತ್ತಿ, ಸೌಂದರ್ಯ ವರ್ಧಕ, ಶ್ರೀಗಂಧದ ಎಣ್ಣೆ, ಮಾರ್ಜಕ ಸೇರಿದಂತೆ ಸುಮಾರು 80 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಎಲ್ಲಾ ಬಗೆಯ ಉತ್ಪನ್ನಗಳು ಮೈಸೂರು ಸ್ಯಾಂಡಲ್ ಸಾಬೂನು ಮೇಳದಲ್ಲಿ ಪ್ರದರ್ಶನ ಕಾಣಲಿವೆ. ಜೊತೆಗೆ ಮಾರಾಟ ಕೂಡ ಹಮ್ಮಿಕೊಳ್ಳಲಾಗಿದೆ. ವಿವಿಧ ಬಗೆಯ ಸೋಪುಗಳು, ಸೌಂದರ್ಯ ವರ್ಧಕಗಳು, ಅಗರಬತ್ತಿಗಳ ಮೇಲೆ ವಿಶೇಷ ರಿಯಾತಿ ಇದೆ. ಮೇಳವು ಪ್ರತಿ ದಿನ ಬೆಳಗ್ಗೆ 9.30 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಸಂಸ್ಥೆಯು ನಮ್ಮ ಪರಂಪರೆ ಮತ್ತು ಸಂಸ್ಕøತಿಯ ಪ್ರತೀಕವಾಗಿದೆ. ಮೈಸೂರು ಮಹರಾಜರ ಅಪೇಕ್ಷೆಯಂತೆ ಸರ್.ಎಂ.ವಿಶ್ವೇಶ್ವರಯ್ಯ, ಕೆಮಿಸ್ಟ್ ಎಸ್.ಜಿ.ಶಾಸ್ತ್ರಿ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಆರಂಭವಾಯಿತು. ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾಗಿ ಇದು ಬೆಳೆಯುತ್ತಿದೆ. ಸುಮಾರು 110 ವರ್ಷಗಳ ಭವ್ಯ ಪರಂಪರೆಯು ಕೂಡ ಇದೆ. ಮೈಸೂರು ಸ್ಯಾಂಡಲ್ ಸಾಬೂನು ವಿಶ್ವದರ್ಜೆಯ ಉತ್ಪನ್ನವಾಗಿ ಐಎಸ್ಒ ಸೇರಿದಂತೆ ಹಲವು ಗುಣಮಟ್ಟದ ಪ್ರಮಾಣ ಪತ್ರವನ್ನು ಕೂಡ ಪಡೆದಿದೆ ಎಂದರು.
ಅದಲ್ಲದೆ 2025-26 ನೇ ಸಾಲಿನಲ್ಲಿ 2,016 ಕೋಟಿ ವಹಿವಾಟು ನಡೆಸಿ 522 ಕೋಟಿ ನಿವ್ವಳ ಲಾಭಗಳಿಸಿದೆ. 2026ರ ಆಗಸ್ಟ್ ವೇಳೆಗೆ 780 ಕೋಟಿ ವಹಿವಾಟು ನಡೆದಿದೆ. 2017 ನೇ ಸಾಲಿನಲ್ಲಿ ಕೆಎಸ್ಡಿಲ್ ಸಂಸ್ಥೆಯು ಹೊಸ ಉತ್ಪನ್ನಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ನೂತನವಾಗಿ ಸುಮಾರು 20 ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶ್ವದ ಸುಮಾರು 25 ದೇಶಗಳಿಗೆ ನಮ್ ಉತ್ಪನ್ನಗಳು ರಫ್ತಾಗುತ್ತಿದ್ದು, ವಾರ್ಷಿಕ 25 ಕೋಟಿ ವಹಿವಾಟು ನಡೆಯುತ್ತಿದೆ ಎಂದರು.

ಕೆಎಸ್ಡಿಎಲ್ ಬ್ರಾಂಚ್ ಮ್ಯಾನೇಜರ್ ಸುಷ್ಮಾ ಮಾತನಾಡಿ, ನಮ್ಮ ಸಂಸ್ಥೆಯು ಶ್ರೀಗಂಧವನ್ನು ನಿರಂತವಾಗಿ ಪಡೆಯಲು ಪರಿಸರ ನೀತಿಯಂತೆ ಹೆಚ್ಚು ಹೆಚ್ಚು ಶ್ರೀಗಂಧ ಬೆಳೆಸಿ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 750 ಕ್ಕೂ ಹೆಚ್ಚು ರೈತರನ್ನ ಭೇಟಿ ಮಾಡಿ ಅವರೊಡನೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಯಾರೇ ಶ್ರೀಗಂಧ ಬೆಳೆಯುವಂತೆ ಕೇಳಿಕೊಂಡು ಬಂದರೆ ಅವರಿಗೆ ಸಂಸ್ಥೆ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಸುರೇಶ್, ಅಶೋಕ್ ಕುಮಾರ್ ಇದ್ದರು.