ಶಿವಮೊಗ್ಗ : ಕೀಳಂಬಿ ಅಗ್ರಿಟೇಕ್ ಸಂಸ್ಥೆಯವರು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಸ್ವಿಇ ೫.೧ ಯಂತ್ರವು ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ಗೌಡ ಹೇಳಿದರು.
ಅವರು ಇಂದು ಡಿಸಿಸಿ ಬ್ಯಾಂಕ್ ಆವರಣದಲ್ಲಿ ಯಂತ್ರವನ್ನು ಖರೀದಿಸಿ, ಅದರ ಪ್ರಾತ್ಯಕ್ಷತೆಯನ್ನು ಅನಾವರಣಗೊಳಿಸಿ ನಂತರ ಮಾತನಾಡಿದರು.

ಕೃಷಿಕರು ಈಗ ಬದಲಾಗಬೇಕಾಗಿದೆ. ರೈತ ಕೂಲಿ ಕಾರ್ಮಿಕರೇ ಈಗ ಸಿಗುವುದು ಕಷ್ಟವಾಗುತ್ತಿದೆ. ಅದರಲ್ಲೂ ಹೊಲ-ಗದ್ದೆ ಕೆಲಸಕ್ಕೆ ಯಂತ್ರಗಳ ಮೊರೆಹೋಗುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಷ್ಠಿತ ಕಂಪನಿ ಕೀಳಂಬಿ ಅಗ್ರಿಟೇಕ್ ಅವರು ರೈತರಿಗಾಗಿಯೇ ರನ್ಹೇರ್ ಎಸ್ಇವಿ ೫.೧ ಎಂಬ ಎಲೆಕ್ಟ್ರಿಕಲ್ ಯಂತ್ರವನ್ನು ಬಿಡುಗಡೆ ಮಾಡಿದೆ. ಇದು ಕೇವಲ ವಿದ್ಯುತ್ನಿಂದ ಚಾರ್ಜ್ ಮಾಡಿ, ರಿಮೋಟ್ ಮೂಲಕ ಕೆಲಸ ಮಾಡಬಹುದಾಗಿದೆ. ಪೆಟ್ರೋಲ್-ಡಿಸೇಲ್ ತುಂಬಿಸಬೇಕಾಗಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಇದು ಕೆಲಸ ನಿರ್ವಹಿಸುತ್ತದೆ ಎಂದರು.
ರೈತರು ತಮ್ಮ ಹೊಲ-ಗದ್ದೆ ಕೆಲಸಕ್ಕೆ ಇದನ್ನು ಖರೀದಿಸಿ, ಉಳಿತಾಯ ಮಾಡಬಹುದು. ಇಂಧನದ ಜೊತೆಗೆ ಶ್ರಮವೂ ಕೂಡ ಕಡಿಮೆಯಾಗುತ್ತದೆ. ಈ ಒಂದು ಯಂತ್ರದಿಂದ ಹಲವು ಪ್ರಯೋಜನಗಳಿವೆ. ಔಷಧಿ ಸಿಂಪಡಿಸುವಿಕೆ, ಕಳೆ ತೆಗೆಯುವುದು, ಜಮೀನು, ಗದ್ದೆ, ತೋಟಗಳಲ್ಲಿ ಮಣ್ಣು, ಗೊಬ್ಬರ, ಬೀಜ ಹೀಗೆ ಕೃಷಿಯ ಪರಿಕರಗಳನ್ನು ಸಾಗಾಣೆಯೂ ಮಾಡಬಹುದಾಗಿದೆ. ಎಕರೆಗಟ್ಟಲೆ ಜಮೀನಿನ ಕಳೆಯನ್ನು ಕೆಲವೇ ಗಂಟೆಗಳಲ್ಲಿ ತೆಗೆಯಬಹುದಾಗಿದೆ. ಇದು ಅತ್ಯಂತ ರೈತಸ್ನೇಹಿಯಾಗಿದೆ ಎಂದರು.

ಕೀಳಂಬಿ ಅಗ್ರಿಟೇಕಿನ ವ್ಯವಸ್ಥಪಕ ನಿರ್ದೇಶಕ ರಾಜೇಶ್ ಕೀಳಂಬಿ ಮಾತನಾಡಿ, ನಮ್ಮ ಮೊದಲ ಯಂತ್ರವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಹಾಗೂ ರೈತರೂ ಆಗಿರುವ ಆರ್.ಎಂ.ಮಂಜುನಾಥಗೌಡರಿಗೆ ನೀಡುತ್ತಿರುವುದು ನಮಗೆ ಅತ್ಯಂತ ಸಂಭ್ರಮ ತಂದಿದೆ. ಡಿಸಿಸಿ ಬ್ಯಾಂಕ್ ರೈತರ ಹಿತಕ್ಕಾಗಿಯೇ ಸದಾ ಶ್ರಮಿಸುತ್ತದೆ. ನಮ್ಮ ಕಂಪನಿಯೂ ಕೂಡ ರೈತರನ್ನೇ ಮುಖ್ಯವಾಗಿ ಇಟ್ಟುಕೊಂಡು ಈ ಯಂತ್ರವನ್ನು ಪರಿಷ್ಕರಣೆ ಮಾಡಿದ್ದೇವೆ. ಕೃಷಿಕರ ಅಗತ್ಯ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿಯೇ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಖರೀದಿಸುವಾಗ ಸ್ವಲ್ಪಬೆಲೆ ಹೆಚ್ಚು ಎನಿಸಿದರೂ ಕೂಡ ರೈತರಿಗೆ ಇದರಿಂದ ಹಲವು ಉಪಯೋಗಗಳಿವೆ. ಒಂದು ವರ್ಷ ಬಳಕೆ ಮಾಡಿದರೆ ಸಾಕು ಅದರ ಹಣ ವಾಪಾಸ್ಸು ಬರುತ್ತದೆ. ಆರ್.ಎಂ.ಮಂಜುನಾಥಗೌಡರು ನಮ್ಮ ಮೊದಲ ಗ್ರಾಹಕರಾಗಿದ್ದಾರೆ. ಅವರು ಯಂತ್ರ ಖರೀಸಿದ್ದಕ್ಕೆ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಎಂ.ಶ್ರೀಕಾಂತ್, ಜಿ.ಎನ್.ಸುಧೀರ್, ಹನುಮಂತ ಮತ್ತಿತರರಿದ್ದರು.