ಶಿವಮೊಗ್ಗ : ದೇವರ ಸನ್ನಿಧಿಗೆ ಬರುವಾಗ ನಮ್ಮ ಅಂತಃರಂಗ ಶುದ್ಧಿಯಾಗಿರಬೇಕು. ಅದರಲ್ಲೂ ಮಾರಿಕಾಂಬೆಯ ಸನ್ನಿಧಿಗೆ ಬರುವಾಗ ಭಕ್ತರು ಏನೂ ಕೇಳಬಾರದು. ಆ ತಾಯಿ ಭಕ್ತರ ಏನು ಬೇಡಿಕೆ ಇದೆಯೋ ಅದನ್ನು ಅನುಗ್ರಹಿಸುತ್ತಾಳೆ ಎಂದು ಹೊರನಾಡು ಶ್ರೀಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಜಿ.ಭೀಮೇಶ್ವರ ಜೋಷಿ ಹೇಳಿದ್ದಾರೆ.
ಅವರು ಇಂದು ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತದ್ವಾರ ಸಮರ್ಪಣಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಶಿವಮೊಗ್ಗ ದೇಶದ ಭೂಪಟದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಸೇವಾ ಗುಣದಲ್ಲಿ ಉನ್ನತ ಸ್ಥಾನ ಪಡೆದಿದೆ. ಕರ್ನಾಟಕದ ವಿಶೇಷತೆಗಳಲ್ಲಿ ಸ್ಥಾನಪಡೆದ ನಗರವಾಗಿದೆ. ಇಲ್ಲಿ ಎಲ್ಲವೂ ಇದೆ. ಸಮುದ್ರವೊಂದು ಇಲ್ಲ. ಸಂಚಾರಿ ನ್ಯಾಯಾಲಯ ಪೀಠ ತರುವ ಪ್ರಯತ್ನವೂ ಸಾಗಿದೆ. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಬುದ್ಧವಾದ ವಾತಾವರಣವಿದೆ. ಇಂದು ಮಾರಿಕಾಂಬ ದೇವಿಗೆ ಸ್ವರ್ಣಮುಖ ಕವಚ ಹಾಗೂ ರಜತ ದ್ವಾರದ ಸಮರ್ಪಣಾ ಭಾಗ್ಯ ನನಗೆ ಸಿಕ್ಕಿದ್ದು ವರ್ಣನೆಗೆ ಸಿಲುಕದ ರೀತಿಯಲ್ಲಿ ತಾಯಿಗೆ ಸಮರ್ಪಣೆ ಆಗಿದೆ.
ಶಿಲ್ಪಿಗಳು ಕೂಡ ತಮ್ಮ ಜನ್ಮ ಸಾರ್ಥಕವಾಯಿತು. ಅನ್ನಿಸುವಂತೆ ಅದು ಮೂಡಿಬಂದಿದೆ. ಸಮರ್ಪಣೆಯ ಮುನ್ನ ಬೆಳ್ಳಿ-ಬಂಗಾರಕ್ಕೆ ಒಂದು ಮೌಲ್ಯ ಇತ್ತು. ಸಮರ್ಪಣೆಯ ನಂತರ ಅದಕ್ಕೆ ಬೆಲೆ ಕಟ್ಟಲಾಗದ ಭವ್ಯತೆ ಮತ್ತು ದಿವ್ಯತೆ ಅದು ಪಡೆದುಕೊಂಡಿದೆ. ಹಿಂದೆ ಗದ್ದುಗೆ ಇತ್ತು. ನಂತರ ಶ್ರೀಧರ ಸ್ವಾಮೀಜಿಗಳು ಈ ಭಾಗಕ್ಕೆ ಬಂದಾಗ ಇಲ್ಲಿಯ ಶಕ್ತಿಯನ್ನುರಿತು ದೇವಿಗೆ ಶಾಶ್ವತವಾದ ಶೀಲಾಮೂರ್ತಿಯನ್ನು ಸ್ಥಾಪಿಸಿ, ಪೂಜಾ ಕೈಂಕರ್ಯ ಕೈಗೊಳ್ಳುವಂತೆ ಸೂಚಿಸಿದರು. ಈಗ ಭವ್ಯ ದೇಗುಲವಾಗಿದೆ. ಎಲ್ಲವೂ ತಾಯಿಯ ಅಪೇಕ್ಷೆಯಂತೆ ಭಕ್ತರೇ ಸ್ವಚ್ಛೆಯಿಂದ ತಾಯಿಗೆ ಸಮರ್ಪಿಸುತ್ತಿದ್ದಾರೆ.
ಸಾಮಾನ್ಯವಾಗಿ ದೇವರ ಮುಖದಲ್ಲಿ ಸೌಮ್ಯ ಸ್ವಭಾವ ಇರುತ್ತದೆ. ಆದರೆ ಮಾರಿಕಾಂಬೆಯ ಮುಖದಲ್ಲಿ ರೌದ್ರತೆ ಇದ್ದರೂ ಕೂಡ ಅದು ತನ್ನ ಭಕ್ತರಿಗೆ ಕೆಟ್ಟ ಕೈಂಕರ್ಯ ಮಾಡಬೇಡ ಎನ್ನುವ ಸಂಕೇತವಾಗಿದೆ. ಅದರ ಜೊತೆಗೆ ತಾಯಿಯ ಅಭಯ ಹಸ್ತ, ಮಗುವಿಗೆ ಮಾತೃ ಸ್ವರೂಪದ ರಕ್ಷಣೆ ನೀಡುವಂತಿದೆ. ನಮ್ಮ ಕರ್ತವ್ಯ ಕರ್ಮದ ಮೇಲೆ ಎಲ್ಲವೂ ಅವಲಂಭಿತವಾಗಿದೆ. ಸರಿಯಾಗಿಯೇ ಹೋಗಬೇಕು ಎನ್ನುವ ಸಂದೇಶವನ್ನು ತಾಯಿ ನೀಡಿದ್ದಾಳೆ. ಗ್ರಾಮೀಣ ಭಾಷೆಯಲ್ಲಿ ‘ನಿಂಗೈತೆ ಮಾರಿಹಬ್ಬ’ ಎನ್ನುತ್ತಾರೆ. ಅದರ ಅರ್ಥ ಕೆಟ್ಟಕಾರ್ಯ ಮಾಡಿದರೆ ಬಲಿ ಕೊಡುತ್ತಾರೆ ಎಂಬ ಸಂಕೇತವಾಗಿದೆ. ಆಕೆಯ ಎದುರಿಗೆ ಮಗುವಾಗಿ ಬರಬೇಕು. ಗೋಮಾತೆಯ ಹಾಲನ್ನು ಕರೆಯುವ ಮುನ್ನ ಶುದ್ಧ ಪಾತ್ರಯನ್ನು ಇಡುವ ರೀತಿಯಲ್ಲಿ ಗೋಮಾತೆಯ ಹಾಲು ಅಮೃತಧಾರೆಯಾಗಿ ಆ ಪಾತ್ರೆಯಲ್ಲಿ ಬೀಳುವ ರೀತಿಯಲ್ಲಿ ತಾಯಿ ಮಗುವಿನ ಸಂಬಂಧದಂತೆ ದೇವಿಗೆ ಸನ್ನಿದಿಗೆ ಬಂದಾಗ ನಮ್ಮ ಅಂತಃರಂಗ ಏನು ಕಲ್ಮಶವಿಲ್ಲದ ಅಮೃತಧಾರೆ ಪಡೆಯಲು ಸಿದ್ಧವಾದ ಖಾಲಿ ಪಾತ್ರೆಯಂತ್ತಿರಬೇಕು. ಪ್ರತೀ ಭಕ್ತನಿಗೆ ಏನು ಕೊಡಬೇಕು ಎಂಬುದು ತಾಯಿಗೆ ಗೊತ್ತಿದೆ. ತಾಯೇ ನನಗೆ ಸಂಪೂರ್ಣ ಅನುಗ್ರಹ ನೀಡು ಎಂದಷ್ಟೇ ಬೇಡಿಕೊಳ್ಳಬೇಕು ಇಡೀ ದೇಶಕ್ಕೆ ಸುಭೀಕ್ಷವಾಗಲಿ, ಅತಿವೃಷ್ಠಿ-ಅನಾವೃಷ್ಠಿಗಳಿಂದ ದೇವಿ ನಮ್ಮ ಕಾಪಾಡಲಿ, ಮಳೆ-ಬೆಳೆ ಬಂದು ಸಮೃದ್ಧಿ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇಡೀ ಜಿಲ್ಲೆಗೆ ಶಾಂತಿ-ನೆಮ್ಮದಿ ಕೊಡುತ್ತಿರುವ ಈ ತಾಯಿಯ ಮಹತ್ವ ನಮಗೆ ಮಾತ್ರ ಗೊತ್ತು. ಬೇಡಿದ ವರವನ್ನು ನೀಡುವವಳು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಈ ಸಮಿತಿ ಅಮ್ಮನ ಆಶೀರ್ವಾದದಿಂದ ವಿಶೇಷ ಕಾರ್ಯಮಾಡಿದೆ. ಶೃಂಗೇರಿ ಶ್ರೀಗಳು ಇಲ್ಲಿ ಬಂದಾಗ ಇಲ್ಲಿ ವಿಶೇಷ ಶಕ್ತಿಯಿದೆ. ಈ ಗದ್ದುಗೆ ಭಾಗದಲ್ಲಿ ಬಲಿ ಕೊಡಬಾರದು ಎಂದು ಹೇಳಿದ್ದರು. ಅದೇ ರೀತಿ ಇಲ್ಲಿ ನಡೆದುಕೊಂಡು ಬಂದಿದೆ. ಈ ಅವಿಸ್ಮರಣೀಯ ಸಮಾರಂಭ ನೋಡುವ ಭಾಗ್ಯ ನಮಗೆ ದೇವಿ ಕರುಣಿಸಿದ್ದಾಳೆ. ಇಡೀ ಜಗತ್ತಿಗೇ ಆಶೀರ್ವಾದ ನೀಡುವ ರೀತಿಯಲ್ಲಿ ಈ ಮುಖ ಕವಚ ಕಂಗೊಳಿಸುತ್ತಿದೆ ಎಂದರು.
ಸಮಿತಿ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಹೆಸರು ಹೇಳಲು ಇಚ್ಛಿಸದ ಎಷ್ಟೋ ಭಕ್ತರು ದೇವಿಗೆ ಅನೇಕ ರೀತಿಯ ಸಮರ್ಪಣೆಯನ್ನು ಮಾಡುತ್ತಾರೆ. ಈ ಕವಚ ಮತ್ತು ರಜತ ದ್ವಾರದ ಬಗ್ಗೆ ನಾವು ಯಾರಲ್ಲಿಯೂ ಏನನ್ನೂ ಕೇಳಿಲ್ಲ. ದೇವಿಯ ಅನುಗ್ರಹದಿಂದ ಭಕ್ತರೇ ಸ್ವಇಚ್ಛೆಯಿಂದ ಬಂದು ಸೇವಾ ರೂಪದಲ್ಲಿ ನೀಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಕ್ಕೆ ಈ ಸಮಿತಿ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಮುಖವಾಡ ಸಮರ್ಪಣೆಯ ಸಮಯದಲ್ಲಿ ಎಲ್ಲಾ ಭಕ್ತರ ಮುಖದಲ್ಲೂ ಅದ್ವಿತೀಯ ಸಂತೋಷದ ಕ್ಷಣವನ್ನು ನೋಡಿದ್ದೇವೆ ಎಂದರು.
ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಶಿವಮೊಗ್ಗದ ಮಾರಿಕಾಂಬೆ ಜಾತಿ, ಧರ್ಮ, ಮೀರಿದ ಭಕ್ತರ ಬೇಡಿಕೆಗಳನ್ನು ಕರುಣಿಸುವ ಮಹಾತಾಯಿಯಾಗಿದ್ದಾಳೆ. ಇಲ್ಲಿ ಯಾವುದೇ ಧರ್ಮಕ್ಕೆ ಸೀಮತವಾಗದ ರೀತಿಯಲ್ಲಿ ಮುಸ್ಲಿಂರು, ಕ್ರಿಶ್ಚಿಯನ್ನರೂ ಕೂಡ ಆಗಮಿಸಿ ದೇವಿಗೆ ಸೇವೆ ಸಲ್ಲಿಸುತ್ತಾರೆ ಎಂದರು.

ಇದಕ್ಕೂ ಮುನ್ನ ಬೆಳಿಗ್ಗೆ ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಗಿ ಸಾಮೂಹಿಕ ಲಲಿತಾ ಹೋಮವನ್ನು ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಬ್ರ.ಸಂತೋಷ್ ಭಾರದ್ವಾಜ್ ಅವರ ಆಚಾರ್ಯತ್ವದಲ್ಲಿ ನಡೆಸಲಾಯಿತು. ಪೂರ್ಣಾಹುತಿಯನ್ನು ಶ್ರೀ ಭೀಮೇಶ್ವರ ಜೋಷಿಯವರ ದಿವ್ಯಸಾನಿಧ್ಯದಲ್ಲಿ ನಡೆಸಿ, ಆಡಳಿತ ಮಂಡಳಿಯ ಮತ್ತು ಸಾಹಸ್ರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ಸುವರ್ಣಮುಖ ಮತ್ತು ರಜತದ್ವಾರ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಶ್ರೀಕಾಂತ್, ಸಮಿತಿಯ ಖಜಾಂಚಿ ಹೆಚ್.ವಿ. ತಿಮ್ಮಪ್ಪ, ಉಪಾಧ್ಯಕ್ಷರಾದ ಎನ್.ಉಮಾಪತಿ, ಕಾರ್ಯದರ್ಶಿ ಎಸ್. ಹನುಮಂತಪ್ಪ, ಡಿ.ಎಂ.ರಾಮಯ್ಯ, ಸಹಕಾರ್ಯದರ್ಶಿ ಸೀತರಾಮ್ ನಾಯಕ್, ಟಿ.ಎಸ್.ಚಂದ್ರಶೇಖರ್, ಹೆಚ್. ಸುನೀಲ್, ಸತ್ಯನಾರಾಯಣ್, ಪಿ.ಸಿ.ಲಿಂಗರಾಜು, ವಿ.ರಾಜು, ತುಕ್ಕೋಜಿರಾವ್, ಹರೀಶ್ಲಾಲ್ ಮತ್ತಿತರರಿದ್ದರು.