ಶಿವಮೊಗ್ಗ : ನೀಟ್ ಪರೀಕ್ಷೆಯಲ್ಲಿನ ಅಕ್ರಮ ಮತ್ತು ಮರು ಪರೀಕ್ಷೆಯಲ್ಲಿನ ಗೊಂದಲಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರೇ ನೇರ ಕಾರಣ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಜುಲೈ 1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಇಂದು ಈ ಕುರಿತು ಮಾಹಿತಿ ನೀಡಿದರು. ನೀಟ್ ಅಕ್ರಮಗಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ಹಾಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಹಾಗೆಯೇ ನೀಟ್ ಪರೀಕ್ಷೆ ಪದ್ದತಿಯನ್ನು ರದ್ದುಗೊಳಿಸಿ ಕರ್ನಾಟಕದ ಸಿಇಟಿ ಮಾದರಿಯನ್ನು ಅಳವಡಿಸಿಕೊಳ್ಳಬೇಕೆಂಬ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್, ಎನ್ಎಸ್ಯುಐ, ಮಹಿಳಾ ಕಾಂಗ್ರೆಸ್, ಸೇವಾದಳ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರತಿಭಟನಾ ರ್ಯಾಲಿಗಳು ಶುರುವಾಗುತ್ತಿವೆ. ನಗರದ ಸೈನ್ಸ್ ಮೈದಾನದಿಂದ ಹಾಗೂ ನಗರದ ಬಸ್ ನಿಲ್ದಾಣದ ಕಡೆಯಿಂದ ಏಕ ಕಾಲದಲ್ಲಿ ಪ್ರತಿಭಟನಾ ರ್ಯಾಲಿಗಳು ಪ್ರಾರಂಭವಾಗಿ ಎರಡು ರ್ಯಾಲಿಗಳು ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಸೇರಲಿವೆ ಎಂದರು.
ರ್ಯಾಲಿ ಬಳಿಕ ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಮಾಜಿ ಸಚಿವ ಮಧು ಬಂಗಾರಪ್ಪ ಹಾಗೂ ಕಿಮ್ಮನೆ ರತ್ನಾಕರ್, ಶಾಸಕರಾದ ಬಿ.ಕೆ. ಸಂಗಮೇಶ್ ಹಾಗೂ ಬೇಳೂರು ಗೋಪಾಲ ಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಸೇರಿದಂತೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ, ಕಿರಿಯ ಮುಖಂಡರು, ವಿವಿಧ ಬ್ಲಾಕ್ ಸಮಿತಿ ಅಧ್ಯಕ್ಷರುಗಳು ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿಭಟನೆಯಲ್ಲಿ 7 ರಿಂದ 8 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದರು.

ಇದೇ ವೇಳೆ, ನೀಟ್ ಅಕ್ರಮದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸಚಿವ ಧರ್ಮೇಂದ್ರ ಪ್ರದಾನ್ ಅವರ ಆಪ್ತ ಕೋಚಿಂಗ್ ಸೆಂಟರ್ಗಳ ಮೂಲಕವೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿ ಬಿಡದೆ ಸುಮ್ಮನೆ ಕುಳಿತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಕುಟುಂಬಗಳಿಗೆ ಸಾಂತ್ವಾನವನ್ನು ಹೇಳಿಲ್ಲ ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಎನ್ಎಸ್ ಯುಐ ಅಧ್ಯಕ್ಷ ವಿಜಯ್, ರಾಜ್ಯ ಜವಳಿ ಮತ್ತು ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪಧಾದಿಕಾರಿಗಳಾದ ಹೆಚ್.ಸಿ.ಯೋಗೀಶ್, ದೇವೇಂದ್ರಪ್ಪ, ವಿಜಯ್ ಕುಮಾರ್(ದನಿ), ಶಿವಾನಂದ, ಎಸ್.ಟಿ. ಹಾಲಪ್ಪ, ಹರ್ಷಿತ್ ಗೌಡ, ಮಧುಸೂದನ್, ಎಸ್.ಶಿವಕುಮಾರ್ ಇದ್ದರು.