ಚಿತ್ರ: ಎಂ. ರವಿ
ಶಿವಮೊಗ್ಗ, ಜೂ.18:
ಶಿವಮೊಗ್ಗ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆ ದುರ್ಗಿಗುಡಿ ಶಾಲೆಯ ಹಿಂಬಾಗಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಮೆಸ್ಕಾಂ ನವರು ಹಾಕಿರುವ ಜಂಕ್ಷನ್ ಬಾಕ್ಸ್ ಸದಾ ತೆರೆದಿರುತ್ತದೆ. ಯಾರಿಗೆ ಯಾವಾಗ ವಿದ್ಯುತ್ ಶಾಕ್ ಎಂಬುದು ಭಯಂಕರ ಪ್ರಶ್ನೆ.

ಕನಿಷ್ಠ ಇದರ ಬಾಗಿಲು ಮುಚ್ಚುವಂತಹ ಯಾವುದೇ ಪ್ರಯತ್ನಗಳು ಇಲಾಖೆಯಿಂದ ನಡೆಯದಿರುವುದನ್ನು ಸಾರ್ವಜನಿಕರು ಹಾಗೂ ಅಲ್ಲಿನ ವರ್ತಕರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಸ್ವಲ್ಪ ಮೇಲ್ಬಾಗದಲ್ಲಿ ಇರುವಂತಹ ಜಂಕ್ಷನ್ ಬಾಕ್ಸ್ ಎರಡೂ ಬದಿಯಲ್ಲಿ ಬಾಗಿಲುಗಳು ಮುಚ್ಚಲು ಬಾರದಂತಹ ಸ್ಥಿತಿಯಲ್ಲಿದ್ದು, ಮಧ್ಯದಲ್ಲಿ ಓಪನ್ ಆಗಿದ್ದ ಇಡೀ

ಮುಖ್ಯ ಬಾಗಿಲನ್ನು ಇಲ್ಲಿನ ಜನರೇ ದಾರ ಕಟ್ಟುವ ಮೂಲಕ ಮುಚ್ಚಲು ಪ್ರಯತ್ನಿಸಿದ್ದಾರೆ. ಆದರೂ ಭಯಭೀತರಾಗಿ ದಾರ ಕಟ್ಟಿದರೂ ಸಹ ಅದು ಸಂಪೂರ್ಣವಾಗಿ ಮುಚ್ಚಿಲ್ಲ.

ಈ ರಸ್ತೆಯು ದುರ್ಗಿಗುಡಿ ಶಾಲೆಯ ಹಿಂಬದಿಯ ಮಾರ್ಗವಾಗಿದ್ದು, ಮಧ್ಯಾಹ್ನದ ಹೊತ್ತು ಶಾಲೆ ಬಿಟ್ಟಾಗ ನೂರಾರು ಮಕ್ಕಳು ಇಲ್ಲಿನ ಅಂಗಡಿಗೆ ಬರುತ್ತಾರೆ. ಆ ಮಕ್ಕಳು ಓಡಾಡುವ ಜಾಗದಲ್ಲಿ ಇಂತಹ ಜಂಕ್ಷನ್ ಬಾಕ್ಸ್ ಇದ್ದರೆ ಮುಂದಿನ ಅನಾಹುತಕ್ಕೆ
ಯಾರು ಕಾರಣರಾಗುತ್ತಾರೆ ಎಂಬುದನ್ನು ಅರಿತುಕೊಳ್ಳುವವರು ಕೂಡಲೇ ಬಂದು ಕ್ರಮಬದ್ಧವಾಗಿ ಬಾಗಿಲು ಹಾಕುವ ಜೊತೆಗೆ ಅವುಗಳನ್ನು ಮುಚ್ಚುವ ಅಥವಾ ಬೀಗ ಹಾಕುವ ಪ್ರಕ್ರಿಯೆಯನ್ನು ಮಾಡಬೇಕೆಂಬುದು ಪಬ್ಲಿಕ್ ಒತ್ತಾಯ.