ಶಿವಮೊಗ್ಗ ಆ , 01
ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದ್ದು, ದುಶ್ಚಟಗಳು ಬೇಡವೆಂದು ಒದ್ದು ಮುಂದೆ ಹೋದಾಗ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಶನಿವಾರ ನಗರದ ಸಹ್ಯಾದ್ರಿ ಕಲಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಎನ್ಎಸ್ಎಸ್ ಘಟಕ 1 ಮತ್ತು 2ರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ‘ವ್ಯಸನಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಪುರುಷರ ಬಗ್ಗೆ ಯುವ ಪೀಳಿಗೆಗೆ, ಜನರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದ್ದು, ಇಂತಹ ಕಾರ್ಯಕ್ರಮ ಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಮಹಾಂತರ ಕೊಡುಗೆ: ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಯುವಕರನ್ನು ದುಶ್ಚಟಗಳ ದುಷ್ಪರಿಣಾಮಗಳಿಂದ ರಕ್ಷಿಸಲು ಜೀವನ ಮುಡಿಪಾಗಿಟ್ಟ ಮಹಾನ್ ಪುರುಷ ಮಹಾಂತ ಶಿವಯೋಗಿಗಳು. ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲ ಸಾಗಬೇಕು.
ವ್ಯಸನಮುಕ್ತ ಸಮಾಜ: ನಮ್ಮ ಆಲೋಚನೆಗಳು ಬದಲಾಗಿ, ಮಹಾಂತ ಶಿವಯೋಗಿಗಳಂತಹ ಮನಸ್ಥಿತಿ ಬೆಳೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ‘ದೇಶ ಮೊದಲು’ ಎಂಬ ತತ್ವದೊಂದಿಗೆ ನಾವೆಲ್ಲ ಸಾಗಬೇಕು. ಮನಸ್ಥಿತಿ ಬದಲಾಗಬೇಕು.

ಪ್ರಸ್ತುತ ಎಲ್ಲೆಡೆ ಮದ್ಯ, ತಂಬಾಕು ಲಭ್ಯವಿದ್ದು, ನಮಗೆ ಏನು ಬೇಕು ಎಂಬ ಆಯ್ಕೆ ನಾವು ಮಾಡಬೇಕಿದೆ. ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದ ಅವರು ನಿತ್ಯ ದುಶ್ಚಟಗಳ ವಿರುದ್ದ ಹೋರಾಡಿ ಅದನ್ನು ಮೆಟ್ಟಿ ನಿಲ್ಲಬೇಕು ಎಂದು ಯುವಜನತೆಗೆ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತಬಾಡಿ, ಮಾದಕ ವಸ್ತಿಗಳ ದುಶ್ಚಟ ಮಾನವನಿಗೆ ಮತ್ತು ಸಮಾಜಕ್ಕೆ ಮಾರಕವಾಗಿದ್ದು ಇದರಿಂದ ದೂರ ಇರಲು ಎಲ್ಲ ರೀತಿಯ ಪ್ರಯತ್ನಗಳಾಗಬೇಕು. ಯುವಜನತೆಯಲ್ಲಿ ಇಂದು ಮೊಬೈಲ್ ರೀಲ್ಸ್ ಕೂಡ ಒಂದು ದೊಡ್ಡ ಚಟವಾಗಿ ಬೆಳೆದಿದೆ. ಯುವಕರು ಜವಾಬ್ದಾರಿ ಅರಿತು, ಕೌಶಲ್ಯ ವೃದ್ಧಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಹಾರೈಸಿದರು.
ಹೆಚ್ಚುಚರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ಮಾತನಾಡಿ, ಸಾಮಾನ್ಯವಾಗಿ 18ರಿಂದ 35 ವರ್ಷದೊಳಗಿನ ಯುವಕರು ದುಶ್ಚಟಗಳಿಗೆ ಬಲಿಯಾಗುವ ಸಂಭವ ಹೆಚ್ಚು.ಗಾಂಜಾ ಸೇರಿದಂತೆ ಹಲವು ಸಿಂಥೆಟಿಕ್ ಮಾದಕ ವಸ್ತುಗಳು ಲಭ್ಯವಿದ್ದು ಇವಕ್ಕೆ ಬಲಿಯಾಗುತ್ತಿರುವುದು ಶೋಚನೀಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಶೆ ಮುಕ್ತ ಭಾರತ ಮಾಡಲು ಬಹಳಷ್ಟು ಒತ್ತು ನೀಡುತ್ತದ್ದು ಎಲ್ಲರ ಸಹಕಾರ ಅಗತ್ಯ ವಾಗಿದೆ. ಸಮಸ್ಯೆಯಲ್ಲಿ ಇರುವವರಿಗೆ ಹೊರಬರಲು ಸಾಕಷ್ಟು ಬೆಂಬಲ, ಚಿಕಿತ್ಸೆ, ಡಿ ಅಡಿಕ್ಷನ್ ಕೇಂದ್ರಗಳು ಲಭ್ಯವಿದ್ದು ಬಳಕೆ ಮಾಡಿಕೊಳ್ಳಬೇಕು.
“ಮಾದಕ ವಸ್ತುಗಳಿಗೆ ಬೇಡ ಬ್ರೋ” : ಯಾವುದೇ ಮಾದಕ ವಸ್ತುಗಳಿಗೆ ‘ಬೇಡ ಬ್ರೋ’ ಅನ್ನುವ ಅಭಿಯಾನದ ಮೂಲಕ ದುಶ್ಚಟಗಳನ್ನು ತಿರಸ್ಕರಿಸಬೇಕು ಎಂದು ಯುವಜನತೆಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿರಾಜ್ ಅಹಮದ್ ಎಸ್ ಮಾತನಾಡಿ , ಸಮಾಧಾನ ಹಾಗೂ ವ್ಯವಧಾನ ಇಲ್ಲದಿದ್ದಾಗ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು. ಮಾದಕ ವಸ್ತುಗಳಲ್ಲದೆ ಅತಿಯಾದ ಶಾಪಿಂಗ್, ಅತಿಯಾಗಿ ತಿನ್ನುವುದು, ಅತಿಯಾದ ಮೊಬೈಲ್ ಬಳಕೆಯಂತಹ ವಿಚಿತ್ರ ವ್ಯಸನಗಳಿಂದ ದೂರವಿದ್ದು, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಡಿಎಲ್ ಓ ಡಾ. ಶಮಾ ಅಂಜುಮ್ ಸಣ್ಣದಾಗಿ ಶುರುವಾಗುವ ಅಭ್ಯಾಸಗಳೇ ಮುಂದೆ ದುಶ್ಚಟಗಳಾಗುತ್ತವೆ. ಆದ್ದರಿಂದ ಮಾದಕ ವಸ್ತುಗಳನ್ನು ಬಳಸುವುದಿಲ್ಲವೆಂದು ನಮಗೆ ನಾವೇ ಪ್ರತಿಜ್ಞೆ ಮಾಡಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ
ಡಾ. ಸಚಿನ್ ಒ. ಎನ್. ಮಾತನಾಡಿ, 12 ರಿಂದ 18ರ ವಯಸ್ಸಿನವರು ಸಾಮಾನ್ಯವಾಗಿ ಚಟಗಳಿಗೆ ಆಕರ್ಷಿತರಾಗುತ್ತಾರೆ ಕುತೂಹಲ ಹಾಗೂ ಗೆಳೆಯರ ಒತ್ತಾಯ ಅಥವಾ ಇತರೆ ಒತ್ತಡದಿಂದ ಚಟಗಳು ಆರಂಭವಾಗುತ್ತವೆ.

ಮೊದಲಿಗೆ ಖುಷಿ ಕೊಡುವ ಚಟ ನಂತರ ಅನೇಕ ಗಂಭೀರ ಆರೋಗ್ಯ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ದುಶ್ಚಟಗಳಿಂದ
ಹೊರ ಬರುವುದು ಕಷ್ಟವಾಗುತ್ತದೆ. ಆದರೆ ಇತರರ ಬೆಂಬಲ, ಸಹಕಾರ ಮತ್ತು ಚಿಕಿತ್ಸೆ ಮೂಲಕ ಹೊರ ಬರಬಹುದು.
ಚಟಗಳಿಂದ ಹೊರಬರಲು ‘ಟೆಲಿ ಮನಸ್’ ಸಹಾಯವಾಣಿ 14416 ಮೂಲಕ ಉಚಿತ ಆಪ್ತಸಮಾಲೋಚನೆ ಪಡೆಯಬಹುದು ಎಂದು ತಿಳಿಸಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಎನ್ಎಸ್ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಹಾಲಮ್ಮ ವಂದಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಆರ್., ಉಪನ್ಯಾಸಕರಾದ ಸಂಗೀತ, ಅರುಣ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.