ಶಿವಮೊಗ್ಗ : ರಾಷ್ಟ್ರಭಕ್ತರ ಬಳಗವು ಎಸ್ಐಆರ್ಗೆ ಸಂಬಂಧಿಸಿದಂತೆ ನಗರದಾದ್ಯಂತ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಈ ಕೇಂದ್ರಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ನಾಗರೀಕರು ಮಾಹಿತಿಪಡೆದು ನಮ್ಮ ನೆರವು ಪಡೆದಿರುತ್ತಾರೆ. ಇದು ರಾಷ್ಟ್ರಭಕ್ತ ಬಳಗದ ಯಶಸ್ವಿ ಸೇವಾ ಕೇಂದ್ರವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಮುಖ್ಯಸ್ಥ ಕೆ.ಈ.ಕಾಂತೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಶುಭ ಮಂಗಳ ಕಲ್ಯಾಣ ಮಂಟಪ, ಎಸ್ಪಿಎಂ ರಸ್ತೆ ಹಾಗೂ ಬೊಮ್ಮನಕಟ್ಟೆಯಲ್ಲಿ ನಾವು ಎಸ್ಐಆರ್ ಸೇವಾ ಕೇಂದ್ರಗಳನ್ನು ತೆರೆದಿದ್ದೆವು. ಈ ಮೂರು ಸೇವಾ ಕೇಂದ್ರದ ಮೂಲಕ ಈಗಾಗಲೇ ಸುಮಾರು 20ಸಾವಿರಕ್ಕೂ ಹೆಚ್ಚು ನಾಗರೀಕರು 2002ರ ಮತದಾರರ ಪಟ್ಟಿಯ ಮಾಹಿತಿಯನ್ನು ಪಡೆದು ಎಸ್ಐಆರ್ ಫಾರಂ ತುಂಬಿ ವಾಪಾಸ್ಸು ನೀಡಿರುತ್ತಾರೆ. ಈಗ ಹಿಂತಿರುಗಿಸುವ ದಿನಾಂಕ ಕೂಡ ಬಂದಿದೆ. ಆದರೂ ಕೂಡ ಸುಮಾರು ಶಿವಮೊಗ್ಗ ನಗರದಲ್ಲಿಯೇ 48,069 ಮತದಾರರು ಪ್ರಕ್ರಿಯೆಯಿಂದ ಹೊರಗೆ ಉಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದರು.

ಶಿವಮೊಗ್ಗ ನಗರದಲ್ಲಿ 2,10,980 ಮತದಾರರು ಎಸ್ಐಆರ್ ಫಾರಂಗಳನ್ನು ತುಂಬಿ ಬಿಎಲ್ಓಗಳಿಗೆ ಹಿಂದಿರುಗಿಸಿದ್ದಾರೆ. ಆದರೆ ಅದರಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಸಿಗದೇ ಇರುವವರು ತಮ್ಮ ಫಾರಂನ್ನು ಕ್ರಮಬದ್ಧವಾಗಿ ತುಂಬದೇ ಇರುವವರು ಅಥವಾ ಫಾರಂಗೆ ಕೇವಲ ಸಹಿಹಾಕಿ ಹಾಗೆಯೇ ಹಿಂತಿರುಗಿಸಿದವರು ಅಥವಾ ತಪ್ಪಾಗಿ ಮಾಹಿತಿ ತುಂಬಿದವರು ಇದ್ದಾರೆ.

ಈಗ ಆಗಸ್ಟ್ 17ರ ಬಳಿಕ ಕರಡು ಪ್ರತಿಯನ್ನು ಹೊರಡಿಸಲಾಗುತ್ತದೆ. ಆನಂತರ ಚುನಾವಣಾ ಆಯೋಗದಿಂದ ನೋಟೀಸ್ ಕೂಡ ಬರುತ್ತದೆ. ಆಗಲೂ ಕೂಡ ಕೆಲಸ ಇರುತ್ತದೆ. ಹಾಗಾಗಿ ನಾವು ಮೂರೂ ಸೇವಾ ಕೇಂದ್ರಗಳ ಪೈಕಿ ಎರಡನ್ನೂ ಮುಚ್ಚಿ ಶುಭ ಮಂಗಳ ಕಲ್ಯಾಣ ಮಂದಿರದ ಸೇವಾ ಕೇಂದ್ರವನ್ನು ಮಾತ್ರ ತೆರೆಯುತ್ತೇವೆ. ನಾಗರೀಕ ಬಂಧುಗಳು ಎಸ್ಐಆರ್ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಅಥವಾ ನೆರವು ಬೇಕಾದಲ್ಲಿ ಶುಭ ಮಂಗಳ ಸೇವಾ ಕೇಂದ್ರದ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.