
ಇಸ್ಲಾಮಾಬಾದ್,ಆ.02:
ಕೇವಲ 189 ದಿನಗಳಲ್ಲಿ ವಿಶ್ವದ 14 ಅತಿ ಎತ್ತರದ ಶಿಖರಗಳನ್ನು ಮೆಟ್ಟಿನಿಂತು ದಾಖಲೆ ಬರೆದಿದ್ದ ನೇಪಾಳದ ಖ್ಯಾತ ಸಾಹಸಿ ಪರ್ವತಾರೋಹಿ ನಿರ್ಮಲ್ “ನಿಮ್ಸ್” ಪುರ್ಜಾ (43) ಅವರು ಪಾಕಿಸ್ತಾನದ ಬ್ರಾಡ್ ಪೀಕ್ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಶಿಖರ ತಲುಪುವ ಹಾದಿಯಲ್ಲಿ ಸಂಭವಿಸಿದ ದುರಂತ ಸಂಬವಿಸಿದೆ.

ಕರಾಕೋರಂ ಪರ್ವತ ಶ್ರೇಣಿಗೆ ಸೇರಿದ ವಿಶ್ವದ 12ನೇ ಅತಿ ಎತ್ತರದ ಶಿಖರವಾದ 8,051 ಮೀಟರ್ ಎತ್ತರದ ‘ಬ್ರಾಡ್ ಪೀಕ್’ ಅನ್ನು ಶುಕ್ರವಾರ ಏರಲು ಅವರು ತಮ್ಮ ತಂಡದೊಂದಿಗೆ ತೆರಳಿದ್ದರು. ಅಂತಿಮ ಹಂತದ ಯತ್ನದಲ್ಲಿದ್ದಾಗ ಎದುರಾದ ತೀವ್ರ ಹಿಮಪಾತದಿಂದಾಗಿ ಇಡೀ ತಂಡ ನಾಪತ್ತೆಯಾಗಿತ್ತು. ನಂತರ ನಡೆದ ಶೋಧದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಶನಿವಾರ ಅವರ ನಿಧನವನ್ನು ‘ಎಲೈಟ್ ಎಕ್ಸ್ಪೆಡ್’ ಸಂಸ್ಥೆಯು ಖಚಿತಪಡಿಸಿದೆ. ನೆಟ್ಫಿಕ್ಸ್ನ ’14 ಪೀಕ್ಸ್: ನಥಿಂಗ್ ಈಸ್ ಇಂಪಾಸಿಬಲ್’ ಸಾಕ್ಷ್ಯಚಿತ್ರದ ಮೂಲಕ ಇವರು ಜಾಗತಿಕವಾಗಿ ಅಪಾರ ಖ್ಯಾತಿ ಪಡೆದಿದ್ದರು.
ಸಂಸ್ಥೆಯಿಂದ ಕಂಬನಿ ಮಿಡಿತ:
“ಅತ್ಯಂತ ನೋವಿನಿಂದ ಈ ವಿಷಯ ತಿಳಿಸುತ್ತಿದ್ದೇವೆ. ನಿಮ್ಸ್ದಾಯ್ ಎಂದೇ ಖ್ಯಾತರಾಗಿದ್ದ ನಿರ್ಮಲ್ ಪುರ್ಜಾ ಅವರು ಬ್ರಾಡ್ ಪೀಕ್ನಲ್ಲಿ ಸಂಭವಿಸಿದ ಹಿಮಪಾತದಿಂದ ನಮ್ಮನ್ನು ಅಗಲಿದ್ದಾರೆ. ಅವರೊಂದಿಗೆ ತೆರಳಿದ್ದ ಇತರೆ ಸದಸ್ಯರು ಕೂಡ ಈ ದುರಂತದಲ್ಲಿ ಬದುಕುಳಿದಿಲ್ಲ,” ಎಂದು ಅವರದೇ ಸಾಹಸಿ ಪ್ರವಾಸಿ ಸಂಸ್ಥೆಯಾದ ‘ಎಲೈಟ್ ಎಕ್ಸ್ಪೆಡ್’ ತನ್ನ ಸಾಮಾಜಿಕ ಜಾಲತಾಣದಲ್ಲಿ ಆಳವಾದ ಶೋಕ ವ್ಯಕ್ತಪಡಿಸಿದೆ.

189 ದಿನಗಳಲ್ಲಿ 14 ಶಿಖರ ಜಯಿಸಿದ ಅಪ್ರತಿಮ ಸಾಹಸಿ:
ಸಾಮಾನ್ಯವಾಗಿ 8,000 ಮೀಟರ್ಗಿಂತ ಎತ್ತರದ 14 ಶಿಖರಗಳನ್ನು ಏರಲು ವರ್ಷಗಳೇ ಬೇಕಾಗುತ್ತವೆ. ಆದರೆ ನಿಮ್ಸ್ 2019ರ ಅವಧಿಯಲ್ಲಿ ಕೇವಲ 6 ತಿಂಗಳು 6 ದಿನಗಳಲ್ಲಿ (189 ದಿನ) ಈ ಎಲ್ಲ ಶಿಖರಗಳನ್ನು ಏರಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ, ಅತ್ಯಂತ ಕಠಿಣವಾದ ಚಳಿಗಾಲದಲ್ಲಿ ಜಗತ್ತಿನ ಎರಡನೇ ಅತಿ ಎತ್ತರದ ‘ಕೆ2’ ಪರ್ವತವನ್ನೇರಿದ ಮೊಟ್ಟಮೊದಲ ತಂಡದ ನಾಯಕರಾಗಿ ಇತಿಹಾಸ ನಿರ್ಮಿಸಿದ್ದರು.

ಈ ಅನಿರೀಕ್ಷಿತ ಅವಘಡದಿಂದಾಗಿ ಪರ್ವತಾರೋಹಣ ಕ್ಷೇತ್ರವು ತನ್ನ ಅತ್ಯಂತ ಧೈರ್ಯಶಾಲಿ ಹಾಗೂ ದಿಗ್ಗಜ ಸಾಹಸಿಯನ್ನು ಕಳೆದುಕೊಂಡಿದ್ದು, ಜಗತ್ತಿನಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ.