ಶಿವಮೊಗ್ಗ, ಜೂನ್ 18 ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ.50 ರಿಯಾಯ್ತಿ ಘೋಷಣೆ ಮಾಡಲಾಗಿದೆ ಹಾಗೂ ರಾಷ್ಟಿçÃಯ ಲೋಕ್ ಅದಾಲತ್, ವಿಶೇಷ ಲೋಕ್ ಅದಾಲತ್, ವ್ಯಸನ ಮುಕ್ತಿ ಜಾಗೃತಿ ಮತ್ತು ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ ಎ ತಿಳಿಸಿದರು.
ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಿ.ಸಿ.ಕೊಠಡಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್, ಸಮಾಧಾನ್ ಸಮಾರೋಹ್ ವಿಶೇಷ ಲೋಕ್ ಅದಾಲತ್, ಎನ್ ಐ ಕಾಯ್ದೆಯ ವಿಶೇಷ ಲೋಕ್ ಅದಾಲತ್, ಖಾಯಂ ಲೋಕ್ ಅದಾಲತ್, ಮಾದಕ ದ್ರವ್ಯ ವ್ಯಸನ ಮುಕ್ತಿ ಜಾಗೃತಿ ಹಾಗೂ ಕೆರೆಗಳ ಪುನಶ್ಚೇತನ ಮತ್ತು ಸಸಿ ನೆಡುವ ಅಭಿಯಾನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
2026 ರ ಮೇ ಮಾಹೆಗಿಂತ ಮೊದಲು ಸಂಚಾರ ನಿಯಮ ಉಲ್ಲಂಘನೆಗಾಗಿ ದಾಖಲಾಗಿರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಭಾರೀ ಶೇಕಡಾ 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ವಿಶೇಷ ರಿಯಾಯಿತಿ ಯೋಜನೆಯು ದಿನಾಂಕ 21-06-2026 ರಿಂದ 10-07-2026 ರವರೆಗೆ ಒಟ್ಟು 20 ದಿನಗಳು ಮಾತ್ರ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಶೇ. 50 ರಷ್ಟು ದಂಡ ಪಾವತಿಸಿ ತಮ್ಮ ಮೇಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ.
ನಗರದಲ್ಲಿ ದಿನಾಂಕ 28-08-2023 ರಿಂದ 30-04-2026 ರವರೆಗೆ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನ ಐಟಿಎಂಎಸ್ ಮೂಲಕ ದಾಖಲಾದ ಇ-ಚಲನ್ಗಳ ವಿವರ ಹೀಗಿದೆ:
ಒಟ್ಟು 4,38,023 ಇ-ಚಲನ್ ಪ್ರಕರಣಗಳು ದಾಖಲಾಗಿದ್ದು ಒಟ್ಟು ದಂಡದ ಮೊತ್ತ ರೂ. 31,80,66,250 ಆಗಿರುತ್ತದೆ. 1,38,986 ಇ-ಚಲನ್ಗಳು ಇತ್ಯರ್ಥಗೊಂಡು ರೂ. 6,09,47,900 ಮೊತ್ತ ವಸೂಲಾಗಿದೆ. 2,99,037 ಪ್ರಕರಣಗಳು ಬಾಕಿ ಇದ್ದು, ರೂ. 23,71,18,350 ದಂಡ ವಸೂಲಾತಿಗೆ ಬಾಕಿ ಇದೆ.
ದಂಡ ಪಾವತಿಸುವ ಬಗೆ-ಸ್ಥಳಗಳು : ಸಾರ್ವಜನಿಕರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ವಿವರಗಳನ್ನು ಆನ್ಲೈನ್ ಮೂಲಕ: NextGen eChallan ವೆಬ್ ಪೋರ್ಟಲ್ ಅಥವಾ ನೇರವಾಗಿ https://103.195.218.159/challan ಲಿಂಕ್ ಬಳಸಿ ಆನ್ಲೈನ್ನಲ್ಲಿ ದಂಡ ಪಾವತಿಸಬಹುದು. ಹಾಗೂ ಈ ಕೆಳಕಂಡ ಸ್ಥಳಗಳಲ್ಲಿ ಪಾವತಿಸಬಹುದು.
ಪೂರ್ವ ಸಂಚಾರ ಪೊಲೀಸ್ ಠಾಣೆ, ಚಂಡಿಕಾ ಪರಮೇಶ್ವರಿ ದೇವಸ್ಥಾನದ ಎದುರು, ಕೋಟೆ ರಸ್ತೆ, ಶಿವಮೊಗ್ಗ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಸಾಗರ ರಸ್ತೆ, ಶಿವಮೊಗ್ಗ. ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಉಂಬ್ಳೇಬೈಲು ರಸ್ತೆ, ಭದ್ರಾವತಿ. ಕರ್ತವ್ಯ ನಿರತ ಶಿವಮೊಗ್ಗ ಸಂಚಾರ ಠಾಣೆಯ ಇ-ಚಲನ್ ಪಿಡಿಎ ಮಷೀನ್ ಹೊಂದಿರುವ ಎಎಸ್ಐ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ.
ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್ ಹಾಗೂ ಪೊಲೀಸ್ ಚೌಕಿ ಸರ್ಕಲ್ಗಳಲ್ಲಿರುವ ಪೊಲೀಸ್ ಕಿಯೋಸ್ಕ್ಗಳಲ್ಲಿ ಬೆಳಗ್ಗೆ 09 ರಿಂದ ರಾತ್ರಿ 09 ಗಂಟೆಯವರೆಗೆ ವಿಶೇಷ ಕೌಂಟರ್ಗಳು ಲಭ್ಯವಿರುತ್ತವೆ.
ಕೇವಲ 20 ದಿನಗಳ ಕಾಲ ಮಾತ್ರ ಲಭ್ಯವಿರುವ ಈ ಸುವರ್ಣಾವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು, ಕಾನೂನುಬದ್ಧವಾಗಿ ತಮ್ಮ ದಂಡ ಇತ್ಯರ್ಥಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಇದೇ ವೇಳೆ ಇ-ಚಲನ್ ದಂಡ ಪಾವತಿ ಕುರಿತಾದ ಡಿಜಿಟಲ್ ಬ್ಯಾನರ್ನ್ನು ಬಿಡುಗಡೆಗೊಳಿಸಿದರು.
ಜುಲೈ 11 ರಂದು ರಾಷ್ಟ್ರೀಯ ಲೋಕ್ ಅದಾಲತ್ : ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಜುಲೈ 11 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
ವೈವಾಹಿಕ/ವಿವಾಹ ವಿವಾದಗಳು, ಅಪಘಾತ ಪರಿಹಾರ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯ, ಚೆಕ್ ಅಮಾನ್ಯ (ಬಾನ್ಸ್) ಪ್ರಕರಣಗಳು, ವಾಣಿಜ್ಯ ವಿವಾದಗಳು, ವೇತನ ಮತ್ತು ಸೇವೆಗೆ ಸಂಬAಧಿಸಿದ ದಾವೆಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗ ಹಾಗೂ ಭೂಸ್ವಾಧೀನ ಪ್ರಕರಣಗಳು ಸೇರಿದಂತೆ ಎಲ್ಲಾ ಸಿವಿಲ್ ದಾವೆಗಳನ್ನು ಇಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.
ಹಿಂದಿನ ಅದಾಲತ್ ಸಾಧನೆ: ಇದಕ್ಕೂ ಮುನ್ನ ಮಾರ್ಚ್ 14 ರಂದು ನಡೆದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನ್ಯಾಯಾಲಯದಲ್ಲಿದ್ದ 14,501 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 28.48 ಕೋಟಿ ಗೂ ಅಧಿಕ ಪರಿಹಾರ ವಿತರಿಸಲಾಗಿತ್ತು. ಹಾಗೆಯೇ 1,40,015 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿ 17.26 ಕೋಟಿ ರೂ.ಗೂ ಅಧಿಕ ಮೊತ್ತದ ವಿವಾದಗಳನ್ನು ಬಗೆಹರಿಸಲಾಗಿತ್ತು.
ಸುಪ್ರೀಂ ಕೋರ್ಟ್ ಪ್ರಕರಣಗಳಿಗೆ “ಸಮಾಧಾನ್ ಸಮಾರೋಹ್”: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಆಗಸ್ಟ್ 21, 22 ಮತ್ತು 23 ರಂದು ಸುಪ್ರೀಂ ಕೋರ್ಟ್ಲ್ಲಿ ಬಾಕಿ ಇರುವ ಪ್ರಕರಣಗಳಿಗಾಗಿ “ಸಮಾಧಾನ್ ಸಮಾರೋಹ್” ಎಂಬ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಸಂಬAಧಿಸಿದAತೆ ಗುರುತಿಸಲಾದ 23 ಪ್ರಕರಣಗಳ ವಿವರಗಳನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು, ಮಧ್ಯಸ್ಥಗಾರರ ಮೂಲಕ ರಾಜೀ ಸಂಧಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಾರ್ವಜನಿಕರು ಈ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದರು.
ಚೆಕ್ ಅಮಾನ್ಯ ಪ್ರಕರಣಗಳಿಗೆ ವಿಶೇಷ ಲೋಕ್ ಅದಾಲತ್ : ಚೆಕ್ ಅಮಾನ್ಯ ಕಾಯ್ದೆ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಜುಲೈ 18 ಮತ್ತು ನವೆಂಬರ್ 21 ರಂದು ವಿಶೇಷ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೇ 31 ರವರೆಗೆ ಒಟ್ಟು 7,525 ಚೆಕ್ ಅಮಾನ್ಯ ಪ್ರಕರಣಗಳು ಬಾಕಿ ಇದ್ದು, ಉಭಯ ಪಕ್ಷಕಾರರು ನ್ಯಾಯಾಧೀಶರ ಸಮ್ಮುಖದಲ್ಲಿ ಇವುಗಳನ್ನು ಅಂದೇ ಇತ್ಯರ್ಥಪಡಿಸಿಕೊಂಡು ಅಂತಿಮ ಆದೇಶ ಪಡೆಯಬಹುದು.
ಖಾಯಂ ಲೋಕ್ ಅದಾಲತ್ ಹಾಗೂ ಜಾಗೃತಿ ಅಭಿಯಾನ : ಸಾರ್ವಜನಿಕ ಉಪಯುಕ್ತ ಸೇವೆಗಳಾದ ಸಾರಿಗೆ (ಭೂ, ಜಲ, ವಾಯು), ಅಂಚೆ, ದೂರವಾಣಿ, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ವಿಮೆ, ಆಸ್ಪತ್ರೆ/ಔಷಧಾಲಯ, ಬ್ಯಾಂಕಿAಗ್ ಹಾಗೂ ರಿಯಲ್ ಎಸ್ಟೇಟ್ ಸೇವೆಗಳಿಗೆ ಸಂಬAಧಿಸಿದ ವಿವಾದಗಳನ್ನು ಬಗೆಹರಿಸಲು ‘ಖಾಯಂ ಲೋಕ್ ಅದಾಲತ್’ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಯಾವುದೇ ಕೋರ್ಟ್ ಶುಲ್ಕ ಇರುವುದಿಲ್ಲ ಹಾಗೂ ಆದಾಯದ ಮಿತಿಯೂ ಇರುವುದಿಲ್ಲ. ಶಿವಮೊಗ್ಗ ಜಿಲ್ಲೆಯು ಮಂಗಳೂರು ವ್ಯಾಪ್ತಿಯ ಖಾಯಂ ಲೋಕ್ ಅದಾಲತ್ ಅಡಿಯಲ್ಲಿ ಬರಲಿದ್ದು, ಇದರ ಜಾಗೃತಿಗಾಗಿ ಜಿಲ್ಲಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಮಾದಕ ದ್ರವ್ಯ ಮುಕ್ತಿ, ಕೆರೆ ಪುನರುಜ್ಜೀವನ ಹಾಗೂ 5 ಕೋಟಿ ಸಸಿ ನೆಡುವ ಪರಿಸರ ಅಭಿಯಾನ :
ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ದುರುಪಯೋಗ ತಡೆಗಟ್ಟಲು ಮತ್ತು ಜನರಲ್ಲಿ ಅರಿವು ಮೂಡಿಸಲು ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೆಕು.
ಹಸಿರು ಅಭಿಯಾನ: ಶಿವಮೊಗ್ಗ ಜಿಲ್ಲೆಯ ಅರಣ್ಯೀಕರಣ ಮತ್ತು ಕೆರೆಗಳ ಪುನರುಜ್ಜೀವನಕ್ಕಾಗಿ ಬೆಂಗಳೂರಿನ ‘ಧರೆ’ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆಯಡಿ ಬೆಂಗಳೂರು ಸುತ್ತಮುತ್ತ 2 ಕೋಟಿ ಹಾಗೂ ಶಿವಮೊಗ್ಗವೂ ಸೇರಿದಂತೆ ಇತರ ಜಿಲ್ಲೆಗಳಲ್ಲಿ 3 ಕೋಟಿ ಸೇರಿ ಒಟ್ಟು 5 ಕೋಟಿ ಸಸಿಗಳನ್ನು ನೆಟ್ಟು, ಅವುಗಳನ್ನು ಮರಗಳಾಗಿ ಪೋಷಿಸುವ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷಗಳ ಕಾಲ ಗಿಡಗಳನ್ನು ಪ್ರಾಧಿಕಾರದ ವತಿಯಿಂದಲೇ ರಕ್ಷಿಸಿ ಪೋಷಿಸಲಾಗುವುದು.
ಸಾರ್ವಜನಿಕರು, ಪಕ್ಷಕಾರರು ಹಾಗೂ ಪರಿಸರ ಆಸಕ್ತರು ಸರ್ಕಾರ ಮತ್ತು ಕಾನೂನು ಸೇವಾ ಪ್ರಾಧಿಕಾರ ನೀಡಿರುವ ಈ ಎಲ್ಲಾ ಸುವರ್ಣಾವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್, ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ದೇವರಾಜ್ ಹಾಜರಿದ್ದರು