ಶಿವಮೊಗ್ಗ: ನಾಗರಿಕರ ಸಮಸ್ಯೆಗಳ ಅರಿವು ಮಹಾನಗರ ಪಾಲಿಕೆಗೆ ಇದ್ದು, ಅವುಗಳನ್ನು ನಿಯಮಾನುಸಾರ ಪರಿಹರಿಸಿಕೊಡಲು ನಾವು ಬದ್ಧರಾಗಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಸ್ಪಷ್ಟಪಡಿಸಿದರು.
ಅವರು ಇಂದು ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಆಯುಕ್ತರ ಜೊತೆ ಮುಖಾಮುಖಿ ಕಾರ್ಯಕ್ರಮದಲ್ಲಿ ನಾಗರಿಕರು ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಕಳೆದ ಎರಡೂವರೆ ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲಿಕ್ಕಾಗದೇ ಇರಬಹುದು. ನಗರದ ಸಮಸ್ಯೆಗಳನ್ನು ಅರಿತುಕೊಳ್ಳಲು ನಾಗರಿಕರ ಜೊತೆಗೆ ಸಂವಾದ ನಡೆಸಲು ಬಹಳ ದಿನಗಳಾದವು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಂಡು ಎರಡೆರಡು ತಿಂಗಳಿಗೆ ಒಂದು ಬಾರಿ ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಂದಿನ ಕಾರ್ಯಕ್ರಮ ನಾಂದಿಯಾಗಿದೆ. ಮುಂಬರುವ ದಿನಗಳಲ್ಲಿ ಕುವೆಂಪು ರಂಗಮಂದಿರದಲ್ಲಿ ಬೆಳಗಿನಿಂದ ಸಂಜೆಯವರೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದ ಅವರು, ಅಧಿಕಾರಿ, ಸಿಬ್ಬಂದಿಗಳಾದ ನಾವು ಸರ್ಕಾರದ ಕೂಲಿಗಳಾಗಿ ಸೇವೆ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವೇದಿಕೆಗಳ ಒಕ್ಕೂಟದ ಪ್ರಮುಖ ಡಾ. ಸತೀಶ್ ಕುಮಾರ್ ಶೆಟ್ಟಿ ಅಹವಾಲು ಮಂಡಿಸಿ, ಡ್ಯೂಟಿ ಸ್ಟಾಂಪ್ ಮೌಲ್ಯದ ಮೇಲೆ ಆಸ್ತಿ ವರ್ಗಾವಣೆ ಶುಲ್ಕ ವಸೂಲಿ ಆಕರಿಸಬೇಕು ಎಂದು ೨೦೦೬ರಲ್ಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಪಾಲಿಕೆ ಅದನ್ನು ಬದಿಗಿಟ್ಟು ಆಸ್ತಿ ಮೌಲ್ಯದ ಮೇಲೆ ಶುಲ್ಕ ಆಕರಣೆ ಮಾಡುತ್ತಿದೆ. ಇಲ್ಲಿಯವರೆಗೆ ಪಾಲಿಕೆ ಸುಮಾರು ೨೫ ಕೋಟಿ ರೂ. ಶುಲ್ಕ ವಸೂಲಿ ಮಾಡಿದ್ದು, ಅದನ್ನು ಸಂಬಂಧಿಸಿದವರಿಗೆ ವಾಪಸ್ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಈ ಶುಲ್ಕ ಆಕರಣೆಯಲ್ಲಿ ಸ್ಥಳೀಯ ಸಂಸ್ಥೆಗಳೇ ಸುಪ್ರೀಂ. ಆದರೂ ಒಕ್ಕೂಟ ನೀಡಿದ ಮನವಿಯ ಮೇರೆಗೆ ಸರ್ಕಾರದ ಕಾರ್ಯದರ್ಶಿ ಹಾಗೂ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಸರ್ಕಾರದಿಂದ ಸೂಕ್ತ ತೀರ್ಮಾನ ಬಂದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ರಾಜಾ ಕಾಲುವೆ ಪಕ್ಕದಲ್ಲಿರುವ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಮೃತ ಲೇಔಟ್ನಲ್ಲಿ ಚರಂಡಿ ಅವ್ಯವಸ್ಥೆಯಿಂದ ಕೂಡಿದ್ದು ಮನೆಗಳಿಗೆ ನೀರು ನುಗ್ಗುತ್ತಿದೆ. ಬೆಂಕಿ ನಗರ, ಬುದ್ಧ ನಗರ ಮೊದಲಾದೆಡೆ ನಿವಾಸಿಗಳಿಗೆ ಇನ್ನೂ ಖಾತೆಯಾಗಿಲ್ಲ. ನವುಲೆ ಕೆರೆ ಬಗ್ಗೆ ಹಲವಾರು ಬಾರಿ ಮನವಿ ನೀಡಿದರೂ ಕ್ರಮವಾಗಿಲ್ಲ. ನಗರದ ಮೀನು ಮಾರುಕಟ್ಟೆ ಕೊಳಚೆ ಪ್ರದೇಶವಾಗಿದೆ. ಫುಟ್ಪಾತ್ ಅತಿಕ್ರಮಣವಾಗಿದೆ. ಹಳೆ ಬಾಕ್ಸ್ ಚರಂಡಿ ತೆಗೆದು ಹೊಸ ಚರಂಡಿ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿ ಬಂತು.

ಬೊಮ್ಮನಕಟ್ಟೆಯ ಎಫ್ ಬ್ಲಾಕ್ನಲ್ಲಿ ಪಾಲಿಕೆಯ ಸಾರ್ವಜನಿಕ ಉದ್ಯಾನವನ, ಸಿಎ, ಖರಾಬು ಜಾಗಗಳು ಅತಿಕ್ರಮಣವಾಗಿದ್ದು ಆರ್ಸಿಸಿ ಕಟ್ಟಡಗಳೇ ತಲೆ ಎತ್ತಿವೆ. ಇದನ್ನು ಪಾಲಿಕೆ ಗಮನಕ್ಕೆ ತಂದರೂ ಅತಿಕ್ರಮಣದಾರರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ರೈಲ್ವೇ ಲೆವೆಲ್ ಕ್ರಾಸ್ ಬಳಿಯ ರಾಜಾ ಕಾಲುವೆ ಸ್ಮಾರ್ಟ್ಸಿಟಿಯಿಂದಾಗಿ ಎಲ್ಲಾ ಕಡೆಯಿಂದ ಇದಕ್ಕೆ ನಾಲೆಗಳನ್ನು ಜೋಡಿಸಲಾಗಿದೆ. ಇದರಿಂದ ಸ್ಥಳೀಯರು ಮಳೆಗಾಲದಲ್ಲಿ ಹಿಂಸೆ ಅನುಭವಿಸುವಂತಾಗಿದೆ. ಸುಪತ್ರಿಕೆ ಪತ್ರ ಕೊಟ್ಟಿದ್ದೀರಿ ಆದರೆ ಇದರಿಂದ ಇ- ಆಸ್ತಿಗೆ ಅವಕಾಶವಿಲ್ಲ. ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ ಎಂದು ನಾಗರಿಕರು ಸಮಸ್ಯೆ ಹೇಳಿಕೊಂಡಿದ್ದಲ್ಲದೇ ಕೈಗಾರಿಕಾ ಕೇಂದ್ರಗಳ ಕನ್ಸರ್ವೆನ್ಸಿಗಳಲ್ಲಿ ಅತಿಕ್ರಮಣ ಹಾಗೂ ಪ್ಲಾಸ್ಟಿಕ್ ದುರ್ಬಳಕೆಗಳು ಯಥೇಚ್ಛವಾಗಿ ಕಾಣುತ್ತಿವೆ. ದುರ್ಗಿಗುಡಿ ಶಾಲೆಯಲ್ಲಿ ಅಲ್ಲಿನ ಎಸ್ಡಿಎಂಸಿ ಗಮನಕ್ಕೆ ತಾರದೇ ಮೂರನೇ ವ್ಯಕ್ತಿಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಶಿಕ್ಷಕರೇ ಒಳಚರಂಡಿಯನ್ನು ಸ್ವಚ್ಛ ಮಾಡುವ ದುಸ್ಥಿತಿ ಎದುರಾಗಿದೆ. ವಾದಿ ಎ ಹುದಾ ಪ್ರದೇಶದಲ್ಲಿ ಒಳಚರಂಡಿ ಬ್ಲಾಕ್ ಆಗಿ ಮನೆಯೊಳಗೆ ಚರಂಡಿ ನೀರು ನುಗ್ಗಿತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದಲ್ಲದೇ ನಗರದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ ಫ್ಲೆಕ್ಸ್ ಹಾವಳಿ ಹೆಚ್ಚುತ್ತಿದ್ದು ಪಾಲಿಕೆ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದವು.
ತುಂಗಾ ನದಿ ತಟದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಸಾರ್ವಜನಿಕ ಪಾರ್ಕ್ ಹಾಗೂ ಶೌಚಾಲಯಗಳು ನಿರ್ಮಾಣವಾಗಿದ್ದು ಸಾರ್ವಜನಿಕ ಉಪಯೋಗಕ್ಕೆ ಸಿಗುತ್ತಿಲ್ಲ. ಅಲ್ಲದೇ, ಹೊರ ರಾಜ್ಯದಿಂದ ವ್ಯಾಪಾರಿಗಳು ಫುಟ್ಪಾತ್ ಮೇಲೆ ಪಾನಿಪುರಿ ಅಂಗಡಿಗಳನ್ನು ಪರವಾನಿಗೆ ಇಲ್ಲದೇ ನಡೆಸುತ್ತಿದ್ದಾರೆ. ಇವರ ವಿರುದ್ಧವೂ ಯಾವ ಕ್ರಮವೂ ಆಗುತ್ತಿಲ್ಲ. ೪ ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಕಸ ವಿಲೇವಾರಿ ಮೊದಲಾದ ಮೂಲ ಸೌಕರ್ಯಗಳು ಇಲ್ಲ. ಅಲ್ಲದೇ, ೧೯೯೬ರಲ್ಲಿ ಪಾಲಿಕೆಗೆ ೨೮ ಹಳ್ಳಿಗಳು ಸೇರಿ ತೆರಿಗೆ ಸಂದಾಯ ಆಗುತ್ತಿದ್ದರೂ ಇ-ಖಾತೆ ಆಗುತ್ತಿಲ್ಲ. ಹಾಗೂ ಕೃಷಿ ನಗರದ ಡಾಲರ್ಸ್ ಕಾಲೋನಿಯಲ್ಲಿ ೨೪*೭ ನೀರು ಕೇವಲ ಮೂರು ಗಂಟೆ ಕಾಲ ಮಾತ್ರ ಬರುತ್ತಿದೆ. ಯುಜಿಡಿಯೂ ಸರಿ ಇಲ್ಲ. ಇದ್ದ ಕಾಂಕ್ರೀಟ್ ರಸ್ತೆ ಒಡೆದು ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂಬ ದೂರುಗಳ ಸುರಿಮಳೆಯೇ ಆಯಿತು.
ಈ ಎಲ್ಲಾ ದೂರುಗಳಿಗೆ ಸ್ಪಂದಿಸಿದ ಆಯುಕ್ತ ಮಾಯಣ್ಣಗೌಡ, ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿ, ಕೆಲವು ಪ್ರಕರಣಗಳಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖಾಮುಖಿಯಲ್ಲಿ ಕೆ.ವಿ. ವಸಂತಕುಮಾರ್, ಪಾಲಾಕ್ಷಿ, ರಾಜಶೇಖರ್, ಶ್ಯಾಮಸುಂದರ್, ರವಿ, ಮಧುಸೂದನ್, ಡಾ. ಶಾಂತಾ ಸುರೇಂದ್ರ, ಕಲ್ಲೂರು ಮೇಘರಾಜ್, ಪರಿಸರ ರಮೇಶ್, ಗಣೇಶ್ ಪ್ರಸಾದ್, ವಿಶ್ವೇಶ್ವರಯ್ಯ, ಚಂದ್ರಶೇಖರ್, ಕೇಶವ, ಬಿ. ಗೋಪಿನಾಥ್, ಪಾಲಿಕೆಯ ಎಲ್ಲಾ ಅಧಿಕಾರಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯು.ಹೆಚ್. ವೈದ್ಯನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಮಿತಿ ನಿರ್ದೇಶಕರಾದ ಟೆಲೆಕ್ಸ್ ರವಿಕುಮಾರ್, ಕೆ.ವಿ. ಶಿವಕುಮಾರ್, ಪದಾಧಿಕಾರಿಗಳಾದ ಹಾಲಸ್ವಾಮಿ, ದೀಪಕ್ ಸಾಗರ್. ಸತ್ಯನಾರಾಯಣ್, ಹುಚ್ಚುರಾಯಪ್ಪ, ಕೆ.ಆರ್. ಸೋಮನಾಥ್ ಇದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಇಂದು ಪತ್ರಿಕಾ ಭವನದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಕೆ.ಮಾಯಣ್ಣಗೌಡ ಅವರೊಂದಿಗಿನ ಮುಖಾಮುಖಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದ್ದು, ನಿರೀಕ್ಷೆಗೂ ಮೀರಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಹುದಿನಗಳಿಂದ ಸಾರ್ವಜನಿಕರು ತಾವು ಅನುಭವಿಸುತ್ತಿದ್ದ ನಾಗರೀಕ ಸಮಸ್ಯೆಗಳನ್ನು ನೇರವಾಗಿ ಆಯುಕ್ತರ ಗಮನಕ್ಕೆ ತಂದು ಕೆಲವೊಂದಕ್ಕೆ ಪರಿಹಾರ ಪಡೆಯುವ ವೇದಿಕೆ ಇದಾಗಿತ್ತು. ಆಯುಕ್ತರು ಕೂಡ ಶಾಂತವಾಗಿಯೇ ಬಹುತೇಕ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು. ಇಂದಿನ ಕಾರ್ಯಕ್ರಮದ ಆಯೋಜಕರಿಗೂ ಮತ್ತು ಆಯುಕ್ತರಿಗೂ ಕೂಡ ನಗರದಲ್ಲಿ ಇಷ್ಟೊಂದು ಸಮಸ್ಯೆ ಇದೆ ಎಂಬ ಅರಿವಿರಲಿಲ್ಲ. ಸಾರ್ವಜನಿಕರ ಅಭಿಪ್ರಾಯದಂತೆ ಕಳೆದ ಕೆಲವು ವರ್ಷಗಳಿಂದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಅಲೆದಾಡುತ್ತಿದ್ದೇವೆ. ಪತ್ರಕರ್ತರ ಸಮ್ಮುಖದಲ್ಲಾದರೂ ನಮ್ಮ ಬಡಾವಣೆಯ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಬಗೆಹರಿಯಲಿ ಎಂಬ ಆಶಯದಿಂದ ಬಂದಿದ್ದೇವೆ. ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ಮಾಡಿದರೆ ಪರಿಹಾರದ ಜೊತೆಗೆ ಮಧ್ಯವರ್ತಿಗಳ ಹಾವಳಿಯೂ ತಪ್ಪಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.