ಶಿವಮೊಗ್ಗ: ಶರಾವತಿ ಕಣಿವೆಯಲ್ಲಿ ಪರಿಸರಕ್ಕೆ ಮಾರಕವಾಗಿರುವ ಇಡೀ ಪಶ್ಚಿಮ ಘಟ್ಟಕ್ಕೆ ಕೊಡಲಿ ಪೆಟ್ಟು ನೀಡಲು ಹೊರಟಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ರೀತಿಯ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಬಾರದು ಎಂದು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಮಿತಿ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ರಾಜ್ಯ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿದೆ. ಈಗಾಗಲೇ ಹೈಕೋರ್ಟ್ ಇದಕ್ಕೆ ಸ್ಟೇ ನೀಡಿದೆ. ಡಿಪಿಆರ್ ಇಲ್ಲದೇ ಟೆಂಡರ್ ಕೂಡ ಕರೆದಿದ್ದಾರೆ. ನಿಯಮಗಳನ್ನು ಮೀರಿ ಟೆಂಡರ್ ಕರೆದ ಮೊದಲ ಯೋಜನೆ ಇದು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಇದರ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದಿದೆ. ಯೋಜನೆಯಿಂದ ಆಗಬಹುದಾದ ಅನಾನುಕೂಲಗಳ ಬಗ್ಗೆ ಹೇಳಿಯಾಗಿದೆ. ಆದರೂ ಕೂಡ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಲು ಹೊರಟಿರುವುದು ಕೇವಲ ಸ್ವಾರ್ಥಕ್ಕಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪರಿಸರ ಇಲಾಖೆಯೂ ಇದಕ್ಕೆ ಒಪ್ಪಿಲ್ಲ. ವನ್ಯಜೀವಿ ಮಂಡಳಿ ಸದಸ್ಯರೂ ಕೂಡ ಈ ಯೋಜನೆ ಸಾಧುವಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯದೇ ರಾಜ್ಯ ಸರ್ಕಾರ ಮೇಘ ಇನ್ಫ್ರಾ ಎಂಬ ಸಂಸ್ಥೆಗೆ ೧೦೫೦೦ ಕೋಟಿ ರೂ. ಟೆಂಡರ್ ನೀಡಿದೆ. ಮೊದಲು ಇದಕ್ಕೆ ೩೫೦೦ ಕೋಟಿ ರೂ. ಆಗಿತ್ತು. ಈಗ ೧೦೫೦೦ ಕೋಟಿ ರೂ. ಆಗಿದೆ. ಇನ್ನೂ ಎಷ್ಟು ಆಗುತ್ತೋ ಗೊತ್ತಿಲ್ಲ ಎಂದರು.

ಈ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದು ಅನುಮತಿ ನೀಡುವಂತೆ ಕೋರಿದ್ದರು. ಈಗ ಅದೇ ಕೆಲಸವನ್ನು ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಯೋಜನೆಯ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡ ಕೇಂದ್ರ ಸರ್ಕಾರದ ಮೇಲೆ ಈ ರೀತಿಯ ಒತ್ತಡ ತರುತ್ತಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಆದ್ದರಿಂದ ರಾಷ್ಟ್ರಭಕ್ತರ ಬಳಗ ಈ ಯೋಜನೆಗೆ ಯಾವುದೇ ಅನುಮತಿ ನೀಡಬಾರದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದೆ ಎಂದರು.
ಜೂ.೨೮ರಂದು ಬೃಹತ್ ಪ್ರತಿಭಟನೆ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಸಾಗರ ಮತ್ತು ಕಾರ್ಗಲ್ನ ಕೆಪಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕೆ.ಇ. ಕಾಂತೇಶ್ ಹೇಳಿದರು.
ಜೂನ್ ೨೮ರಂದು ಬೆಳಗ್ಗೆ ೭ ಗಂಟೆಗೆ ಶುಭಮಂಗಳ ಸಮುದಾಯ ಭವನದಿಂದ ಸುಮಾರು ೫೦ ಬಸ್ಗಳಲ್ಲಿ ಪರಿಸರಾಸಕ್ತರು, ರಾಷ್ಟ್ರಭಕ್ತರ ಬಳಗದವರು, ಪರಿಸರಕ್ಕಾಗಿ ನಾವು ಸಮಿತಿಯವರು ಸಾಗರಕ್ಕೆ ಹೊರಡುತ್ತೇವೆ. ಸುಮಾರು ಎರಡೂವರೆ ಸಾವಿರ ಪರಿಸರ ಪ್ರೇಮಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸಾಗರದ ಗಾಂಧಿ ಸರ್ಕಲ್ನಲ್ಲಿ ಬೆಳಗ್ಗೆ ೧೦.೩೦ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾಗರದ ಪರಿಸರಾಸಕ್ತರು ಇದಲ್ಲಿ ಭಾಗವಹಿಸಲಿದ್ದಾರೆ. ಮಾರುತಿ ಗುರೂಜಿ ಅವರು ಇದರ ನೇತೃತ್ವ ವಹಿಸಲಿದ್ದಾರೆ ಎಂದರು.
ನಂತರ ಅಲ್ಲಿಂದ ೩.೩೦ಕ್ಕೆ ಕಾರ್ಗಲ್ ನಲ್ಲಿರುವ ಕೆಪಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಕಾಂತ್, ವಿ.ರಾಜು, ಮಹದೇವಸ್ವಾಮಿ, ಅಶೋಕ್ ಕುಮಾರ್, ಸುಬ್ರಮಣ್ಯ, ಈಶ್ವರರಾವ್, ರಮೇಶ್, ವಿಶ್ವೇಶ್ವರಯ್ಯ, ಶ್ರೀಪಾದ್ ಭಟ್, ಪ್ರಕಾಶ್, ಅರುಣ್, ಜನಾರ್ಧನ ಪೈ ಸೇರಿದಂತೆ ಹಲವರಿದ್ದರು.

ಆರ್ಎಸ್ಎಸ್ ವಿರುದ್ಧ ಮಾತನಾಡುವವರು ನೆಲ ಕಚ್ಚುತ್ತಾರೆ
ಆರ್ಎಸ್ಎಸ್ ವಿರುದ್ಧ ಅಪಪ್ರಚಾರ ಮಾಡುವವರು ಖಂಡಿತ ನೆಲ ಕಚ್ಚಿ ಹೋಗುತ್ತಾರೆ. ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿ ಇದು ನೋಂದಣಿಯಾಗಿಲ್ಲ. ಇದರ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಲೆಕ್ಕ ಕೇಳಲು ಇವರು ಯಾರು? ಈತ ಒಬ್ಬ ಅಯೋಗ್ಯ. ಪ್ರಚಾರಕ್ಕಾಗಿ ಏನೇನೋ ಬಡಬಡಿಸುತ್ತಾನೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಅಡಿಯಲ್ಲಿ ಸಾವಿರಾರು ಸಂಘ ಸಂಸ್ಥೆಗಳಿವೆ. ನೂರಾರು ವರ್ಷಗಳ ಇತಿಹಾಸವಿದೆ. ಖರ್ಗೆ ಅವರಿಗೆ ಆರ್ಎಸ್ಎಸ್ ಮೇಲೆಯೇ ಏಕೆ ಕಣ್ಣು? ಮುಸ್ಲಿಂ ಸಂಘಟನೆಗಳ ಬಗ್ಗೆ ಅವರೇಕೆ ಮಾತನಾಡುತ್ತಿಲ್ಲ. ಅವರು ಮಂತ್ರಿಯಾಗಿರಬಹುದು, ಅವರಿಗೆ ಕಾನೂನು ಗೊತ್ತಿದೆ ತಾನೇ? ಕಾನೂನು ಕ್ರಮ