ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ, ಅನುದಾನ ದುರ್ಬಳಕೆ ಹಾಗೂ ಎಸ್.ಟಿ. ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಜಿಲ್ಲಾ ಜೆಡಿಎಸ್ ಎಸ್ಟಿ ಘಟಕದ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ಮುನ್ನ ಶಾಸಕಿ ಶಾರದಾ ಪೂರ್ಯನಾಯ್ಕ ಅವರ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಕಾಲ್ನಡಿಗೆ ಜಾಥಾದಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿದ ಎದುರು ಬೃಹತ್ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಶಾರದಾ ಪೂರ್ಯನಾಯ್ಕ, ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನಿರಂತರವಾಗಿ ದ್ರೋಹ ಎಸಗುತ್ತಿದ್ದು, ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ೧೮೭ ಕೋಟಿ ರೂ. ಹಗರಣವು ದೇಶಾದ್ಯಂತ ಸುದ್ದಿಯಾಗಿದ್ದು, ಸಿಬಿಐ ತನಿಖೆ ನಡೆಯುತ್ತಿದ್ದರೂ ಲೂಟಿಯಾದ ಹಣ ಇನ್ನೂ ವಾಪಸ್ಸಾಗಿಲ್ಲ. ಸರ್ಕಾರವು ಎಸ್.ಟಿ. ಇಲಾಖೆ ಹಾಗೂ ನಿಗಮಕ್ಕೆ ಸರಿಯಾಗಿ ಅನುದಾನ ನೀಡದೆ, ಬಡವರಿಗೆ ಬಳಕೆಯಾಗಬೇಕಿದ್ದ ಹಣವನ್ನು ಇತರ ಖಾತೆಗಳಿಗೆ ವರ್ಗಾಯಿಸಿದೆ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರ ಸಿಕ್ಕಿಲ್ಲ, ತನಿಖೆಯೂ ಆಗಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಹೆಚ್.ಆರ್.ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಪಂಗಡದ ಪೌಷ್ಟಿಕ ಆಹಾರ ಯೋಜನೆಯ ೧೨೦ ಕೋಟಿ ರೂ. ಟೆಂಡರ್ನಲ್ಲಿ ಬಹುಕೋಟಿ ದುರ್ಬಳಕೆಯಾಗಿದ್ದು, ಬಡವರ ಅನ್ನಕ್ಕೆ ಕೈಹಾಕಿದ ಈ ಹಗರಣದ ತನಿಖೆ ಆಗಬೇಕಿದೆ. ಕಳೆದ ೨ ವರ್ಷಗಳಿಂದ ಶೇ. ೯೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೆ, ೨೦೨೪-೨೫ ನೇ ಸಾಲಿನಲ್ಲಿ ಶೇ. ೮೦ ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ದೂರಿದರು.
ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. ೧೮೭ ಕೋಟಿ ರೂ. ಹಗರಣ ಹಾಗೂ ೧೨೦ ಕೋಟಿ ರೂ. ಪೌಷ್ಟಿಕ ಆಹಾರ ಯೋಜನೆ ಹಗರಣದ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ಲೂಟಿಯಾದ ಹಣವನ್ನು ವಸೂಲಿ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಬಾಕಿ ಇರುವ ಎಲ್ಲಾ ವಿದ್ಯಾರ್ಥಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ನಿಲ್ಲಿಸಿರುವ ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಎಸ್.ಟಿ. ವಿದ್ಯಾರ್ಥಿಗಳ ಹಾಸ್ಟೆಲ್ಗಳ ಮೂಲಸೌಕರ್ಯ ಉತ್ತಮ ಪಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಶೇ. ೭ ರಷ್ಟು ಮೀಸಲಾತಿಯನ್ನು ೯ನೇ ಶೆಡ್ಯೂಲ್ಗೆ ಸೇರ್ಪಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಹಾಗೂ ಉಚ್ಛ ನ್ಯಾಯಾಲಯದ ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಬೇಕು. ನಿಗಮ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷೆ ಶಾರದಾ ಅಪ್ಪಾಜಿಗೌಡ, ಜಿಲ್ಲಾ ಆಧ್ಯಕ್ಷ ಕೆ.ಎನ್.ರಾಮಕೃಷ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ದಾದಾಪೀರ್, ತ್ಯಾಗರಾಜ್, ಮಧು ಕುಮಾರ್, ಪುರುಷೋತ್ತಮ್, ಕಾಂತರಾಜ್ ಸೋಮಿನಕೊಪ್ಪ, ಬಸವರಾಜು, ನರಸಿಂಹ ಗಂಧದಮನೆ, ಹೆಚ್.ಎಂ.ಸಂಗಯ್ಯ, ಸುಧಾ, ಶಿಲ್ಪ, ಸುನೀತಾ, ಸತ್ಯವತಿ, ವಸಂತ, ಶೃತಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.