ಶಿವಮೊಗ್ಗ : ಮಹಿಳೆಯರಿಗೆ ಅಗಾಧ ಶಕ್ತಿಯಿದ್ದು ಅಷ್ಠಭುಜ ಧಾರಣಿಯಾಗಿ ಏಕ ಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವ ಶಕ್ತಿ ಹೊಂದಿದ್ದಾಳೆ ಎಂದು ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಹೇಳಿದರು.
ಅವರು ಇಂದು ನಗರದ ಸಕ್ಷಮ ಶಿವಮೊಗ್ಗವತಿಯಿಂದ ಚೆಶೈರ್ ಡಿಸೈಬಿಲಿಟಿ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಸಕ್ಷಮ ಕಾರ್ಯಾಲಯದಲ್ಲಿ ವಿಶೇಷ ಚೇತನ ಮಹಿಳೆಯರಿಗಾಗಿ ನಡೆಯುತ್ತಿರುವ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರಿಗೆ ಎಲ್ಲವೂ ಸಾಧ್ಯ. ಮಾನಸಿಕವಾಗಿ ಮಹಿಳೆಯರು ಸದೃಢವಾಗಿರಬೇಕು. ಕೀಳರಿಮೆ ಬಿಡಬೇಕು. ಸಂಸಾರದಲ್ಲಿ ಗಂಡಸರು ಬೇಗ ಕುಸಿಯುತ್ತಾರೆ. ಆಗ ಮಹಿಳೆಯರು ಧೈರ್ಯ ತುಂಬಬೇಕು. ನಮ್ಮಲ್ಲಿರುವ ಶಕ್ತಿಯನ್ನು ಅರ್ಥಮಾಡಿಕೊಂಡು ನಾವೇ ಸಾಧನೆ ಮಾಡಿ,

ಸಮಾಜಕ್ಕೆ ಮಾದರಿಯಾಗಬೇಕು. ಕಬ್ಬಿಣದ ಕಾಲು ಹಾಕಿಕೊಂಡು ಎವೆರೆಸ್ಟ್ ಏರಿದ ಮಹಿಳೆ ಮತ್ತು ವಿಶ್ವಕಪ್ ಗೆದ್ದ ಅಂಧರ ಮಹಿಳಾ ಕ್ರಿಕೇಟ್ ತಂಡ ಹಾಗೂ ಅನಕ್ಷರಸ್ಥೆಯಾದರೂ ಐಟಿ ಉದ್ಯಮ ಕಟ್ಟಿದ ಸುನೀತಾರೆಡ್ಡಿ, ಇಂಜಿನೀಯರಿಂಗ್ ಪದವೀಧರೆಯಾದರೂ ಕೂಡ ಜಮೀನ್ದಾರನಿಗೆ ಮದುವೆಯಾದ ಮಾತ್ರಕ್ಕೆ ತನ್ನ ಬರಡು ಭೂಮಿಯಲ್ಲಿ ಸತತ ಪ್ರಯತ್ನದಿಂದ ಮಿಶ್ರಬೆಳೆಯನ್ನು ಬೆಳೆದು, ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ರೈತಮಹಿಳೆಯಾಗಿ ಹೆಸರುಗಳಿಸಿದ ಕವಿತಾಮಿಶ್ರ ಇವರೆಲ್ಲರೂ ನಮ್ಮ ಕಣ್ಣ ಮುಂದೆ ಇದ್ದಾರೆ.

ಹಣೆಬರಹವನ್ನು ತೆಗಳುತ್ತಾ ಸುಮ್ಮನೆ ಕೂರಬೇಡಿ. ಪುಟಾಣಿ ಇರುವೆ ತನ್ನ ದೇಹಕ್ಕಿಂತ ಭಾರದ ವಸ್ತುವನ್ನು ಕಟ್ಟಿಕೊಂಡು ಹೋಗುತ್ತದೆ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ, ದೇವರು ಪುಣ್ಯ ಮಾಡಿದವರಿಗೆ ಮಾತ್ರ ಮನುಷ್ಯ ಜನ್ಮ ಕೊಡುತ್ತಾನೆ. ಅದರಲ್ಲೂ ಅದರಲ್ಲೂ ಹೆಣ್ಣಾಗಿ ಹುಟ್ಟುವುದು ಪುಣ್ಯವಂತರು ಮಾತ್ರ. ಬಾಹ್ಯ ಸೌಂದರ್ಯಕ್ಕಿಂತ ನಮ್ಮ ಒಳಗಿನ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆ ನಮ್ಮ ಆಂತರಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಖದ ಸುಪತ್ತಿಗೆಯಲ್ಲಿದ್ದವರು ಯಾರೂ ಸಾಧಕರಾಗಿಲ್ಲ. ಅವಕಾಶವನ್ನು ಉಪಯೋಗಿಸಿಕೊಂಡು ಜೀವನೋತ್ಸಾಹದಿಂದ ಪ್ರಯತ್ನ ಪಟ್ಟವರು ಮಾತ್ರ ಸಾಧಕರಾಗಿದ್ದಾರೆ. ನೀವು ಇವತ್ತು ಪಡೆದ ಹೊಲಿಗೆಯಂತ್ರ ಮತ್ತು ತರಬೇತಿ ಮನಗೆ ಮಾತ್ರ ಸೀಮಿತವಾಗದೆ ನಾಲ್ಕು ಜನರಿಗೆ ಉದ್ಯೋಗ ಕೊಡುವ ರೀತಿಯಲ್ಲಿ ಸ್ವಯಂ ಉದ್ಯೋಗವನ್ನು ಕಟ್ಟಿಬೆಳೆಸಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಸಿಡಿಟಿ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ನಟರಾಜ್ ಮಾತನಾಡಿ, ಸಕ್ಷಮ ದೇಶಾದ್ಯಂತ ೧೮ ಕೇಂದ್ರಗಳನ್ನು ಹೊಂದಿದೆ. ಏಳು ಸಾವಿರಕ್ಕೂ ಹೆಚ್ಚು ವಿಕಲಚೇತನ ಮಹಿಳೆಯರಿಗೆ ಸ್ವಯಂಉದ್ಯೋಗ ತರಬೇತಿ ನೀಡಿ, ಕೆಲಸವನ್ನು ನೀಡಿದೆ. ಇಂದು ಸೀರೆಗಿಂತ ರವಿಕೆಗೆ ಹೆಚ್ಚಿನ ಬೆಲೆ ಇದೆ. ಅದರಲ್ಲೂ ಡಿಸೈನ್ಗಳನ್ನು ಕಲಿತರೆ ಹೆಚ್ಚಿನ ಆದಾಯ ಬರುತ್ತದೆ. ಮೊಬೈಲ್ಗೆ ಕರೆನ್ಸಿ ಹಾಕಿದರೆ ಮಾತ್ರ ಚಾರ್ಜ್ ಆಗುತ್ತದೆ. ಅದೇ ರೀತಿ ಜೇಬಿನಲ್ಲಿ ದುಡ್ಡಿದ್ದಾಗ ಮಾತ್ರ ನಾವು ಸಹ ಸದಾ ಚಾರ್ಜಾಗಿರುತ್ತೇವೆ. ಘನತೆ, ಗೌರವ ಕೂಡ ಸಿಗುತ್ತದೆ. ದೇಶಕ್ಕೆ ಅತೀ ಹೆಚ್ಚು ಕೊಡುಗೆ ಕೊಟ್ಟವರು ಅವಿದ್ಯಾವಂತರೇ ಜಾಸ್ತಿ. ವಿಕಲಚೇತನತೆ ಎಂಬುದು ಸಮಸ್ಯೆಯೇ ಅಲ್ಲ, ಕೊರತೆ ಇಲ್ಲದ ವ್ಯಕ್ತಿಯೇ ಇಲ್ಲ. ನಿರಂತರ ಪ್ರಯತ್ನ ಇದ್ದಾಗ ಕಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದರು.
ಸಕ್ಷಮದ ಪ್ರಮುಖರಾದ ಅಚ್ಚುತರಾವ್ ಮಾತನಾಡಿ, ಪ್ರತಿ ಕುಟುಂಬ ನಾರಿಶಕ್ತಿಯ ಮೇಲೆ ನಿಂತಿದೆ. ಅವರೇ ಕುಟುಂಬಕ್ಕೆ ಆಧಾರ. ಎಲ್ಲಾ ಮಹಿಳೆಯರು ಕೂಡ ಸಾಧನೆ ಮಾಡಲು ಅರ್ಹರಿದ್ದಾರೆ. ಆತ್ಮವಿಶ್ವಾಸ ಇರಬೇಕು ಎಂದರು.
ಸಕ್ಷಮದಿಂದ ಇದೂವರೆಗೆ ಆರು ಬ್ಯಾಚ್ಗಳಲ್ಲಿ ತರಬೇತಿ ನೀಡಿ ೧೦೬ ಜನರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದ್ದು, ಇದು ೨೪ ವಿಕಲ ಚೇತನರಿಗೆ ತರಬೇತಿ ಪ್ರಮಾಣಪತ್ರ ಮತ್ತು ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಷಮ ಶಿವಮೊಗ್ಗದ ಅಧ್ಯಕ್ಷರಾದ ಭಾಸ್ಕರ್ಕಾಮತ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಕ್ಷಮದ ಪ್ರಮುಕರಾದ ಕುಮಾರ್ಶಾಸ್ತ್ರೀ, ಶೈಲಜಾ ಹಾಗೂ ಎಡಿಡಿ ಸಂಚಾಲಕಿ ಸುನೀತ ಮತ್ತಿತರರಿದ್ದರು.