ಶಿವಮೊಗ್ಗ : ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ನೀಡುವ ನಾರೀಶಕ್ತಿವಂದನಾ ಅಧಿನಿಯಮ (ಮಹಿಳಾ ಮೀಸಲಾತಿ) ಕಾಯ್ದೆಯು ಐತಿಹಾಸಿಕ ಹೆಜ್ಜೆಯಾಗಿದ್ದು, ಈ ನಿರ್ಧಾರಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆಗಳು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿಯ ಮೂಲ ಕಾನೂನಿಗೆ ತಿದ್ದುಪಡಿ ತಂದು ೨೦೧೧ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ ಮಹಿಳಾ ಮೀಸಲಾತಿಯ ಕಾನೂನನ್ನು ಜಾರಿಗೆ ತರಲಾಗುವುದು. ಈಗಾಗಲೇ ಕರಡು ಪ್ರತಿ ಸಿದ್ಧವಾಗಿದ್ದು, ನಾಳೆಯಿಂದ ಮೂರು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನ ನಡೆಯಲಿದ್ದು, ಅಲ್ಲಿ ನಾರೀಶಕ್ತಿ ವಂದನಾ ಅಧಿನಿಯಮವನ್ನು ಜಾರಿಗೆ ತರಲಾಗುವುದು ಎಂದರು.


ಈ ಮಹಿಳಾ ಮೀಸಲಾತಿಯು ಭಾರತದ ಅರ್ಧನಾರೀಶ್ವರ ಕಲ್ಪನೆಯನ್ನು ಹೊಂದಿದ್ದು, ಮಹಿಳಾ ಶಕ್ತಿಯನ್ನು ಗೌರವಿಸುವ ಕ್ರಮವಾಗಿದೆ. ಏ.೨೦ರಂದು ಬಸವಜಯಂತಿಯೂ ಕೂಡಾ ಇದ್ದು, ಬಸವಣ್ಣನವರ ಸಾಮಾಜಿಕ ನ್ಯಾಯದ ಸಮ ಸಮಾಜದ ಮಹಿಳೆಯರಿಗೂ ಸಮಾನತೆ ನೀಡುವ ಕಲ್ಪನೆಯೂ ಇದಾಗಿದ್ದು, ಇದು ಕೇವಲ ಕಾಯ್ದೆಯಾಗಿ ಉಳಿಯುವುದಿಲ್ಲ ಮಹಿಳೆಯರಿಗೆ ನೀಡುವ ಅತ್ಯಂತ ಗೌರವವಾಗಿದೆ ಮತ್ತು ಇದೊಂದು ಹೊಸ ಮೈಲಿಗಲ್ಲಾಗಿದ್ದು, ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದರು. ಇದೀಗ ಈ ಹೋರಾಟಕ್ಕೆ ಮೋದಿ ಸರ್ಕಾರದಲ್ಲಿ ಜಯ ಸಿಕ್ಕಂತಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ಜಾರಿಯಾಗಲಿದೆ. ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಆಧಾರದಲ್ಲಿ ಲೋಕಸಭಾ ಸದಸ್ಯರ ಸಂಖ್ಯೆ ೫೪೩ರಿಂದ ೮೫೦ಕ್ಕೆ ಏರಲಿದ್ದು, ಇದರಲ್ಲಿ ಸುಮಾರು ೨೭೦ ಸ್ಥಾನಗಳು ಮಹಿಳೆಯರ ಪಾಲಾಗಲಿದೆ. ಇದೊಂದು ಸಂವಿಧಾನ ಬದ್ಧ ಅವಕಾಶವಾಗಿದೆ. ನಾನು ಸಂಸದನಾಗಿ ಹಲವು ವಿಶಿಷ್ಟ ಸಂದರ್ಭಗಳಲ್ಲಿ ಕೆಲಸ ಮಾಡಿದ ಹೆಮ್ಮೆ ನನಗಿದೆ. ಕಾಶ್ಮೀರ ಕಾಯ್ದೆ, ಜಿಎಸ್ಟಿ ಹೀಗೆ ಹಲವು ಅತ್ಯುತ್ತಮ ಸಂದರ್ಭಗಳಿಗೆ ಸಂಸದನಾಗಿದ್ದು, ನನಗೆ ಹೆಮ್ಮೆ ತಂದಿದೆ ಎಂದರು.
ನಾಳೆಯಿಂದ ನಡೆಯುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಈ ಐತಿಹಾಸಿಕ ಮಹಿಳಾ ಮೀಸಲಾತಿಯ ಚರ್ಚೆಯಲ್ಲಿ ನಾನೂ ಕೂಡಾ ಭಾಗವಹಿಸುತ್ತಿದ್ದೇನೆ. ಇದಕ್ಕಾಗಿ ನಾನು ಶಿವಮೊಗ್ಗ ಕ್ಷೇತ್ರದ ಎಲ್ಲಾ ಮಹಿಳೆಯರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಕೆಲವು ಆರೋಪಿಸಿದಂತೆ ಇದು ಚುನಾವಣೆಯ ಗಿಮಿಕ್ ಅಂತೂ ಅಲ್ಲ ಎಂದರು.

ಮೇ.೧ ರಿಂದ ಸ್ಥಗಿತಗೊಳ್ಳಲಿರುವ ಇಂಡಿಗೋ ವಿಮಾನ ಸೇವೆಯನ್ನು ಉಳಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಹಾಗೆಯೇ ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಜಾಗ ನೀಡಿದ ರೈತರಿಗೆ ಪರಿಹಾರ ಕೂಡಾ ನೀಡಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಲಾಗಿದೆ. ಇನ್ನು ಮೂರು ತಿಂಗಳೊಳಗೆ ಬಾಕಿ ಕೆಲಸ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ನಾರೀಶಕ್ತಿ ವಂದನಾ ಅಧಿನಿಯಮ ಜಾರಿಗಾಗಿ ಶ್ರಮಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಮಾಲತೇಶ್, ಶಿವರಾಜ್, ಎಸ್.ಚಂದ್ರಶೇಖರ್, ಮಹಿಳಾ ಮೋರ್ಚಾದ ಪ್ರಮುಖರಾದ ಮಧುರಾ ಶಿವಾನಂದ್, ಗಾಯತ್ರಿ ದೇವಿ, ಪದ್ಮಿನಿ, ಸುರೇಖಾ ಮುರಳೀಧರ್, ಸರಸ್ವತಿ, ಮಂಗಳಾ ನಾಗೇಂದ್ರ, ಮಂಜುಳಾ ಭದ್ರಾವತಿ, ರಶ್ಮಿ, ಶಿಲ್ಪಾ, ಮೈತ್ರಿ ಪಟೇಲ್, ಸುಮಲತಾ ಸೇರಿದಂತೆ ಹಲವರಿದ್ದರು.