
ಶಿವಮೊಗ್ಗ, ಏ.14: ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಾಗಿದೆ. ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದಾಗ, ಸಾರ್ವಜನಿಕ ಸ್ಥಳವೊಂದರಲ್ಲಿ ಪದವಿ ಓದುತ್ತಿರುವ ಯುವಕನೊಬ್ಬ ಅಸ್ವಸ್ಥನಂತೆ ತೂರಾಡುತ್ತಿರುವುದು ಕಂಡುಬಂದಿದೆ. ಆತನ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕ ಗಾಂಜಾ ಸೇವನೆ ಮಾಡಿರಬಹುದೆಂಬ ಅನುಮಾನದ ಮೇಲೆ ಆತನನ್ನು ತಕ್ಷಣವೇ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯಿಂದ ಬಂದ ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ಆತನ ವಿರುದ್ಧ ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೋಡಲು ತನ್ನಂತೆ ಇಲ್ಲ ಎಂದು ಮಗನನ್ನೇ ಕೊಲೆಗೈದ ತಂದೆ




ವಿಜಯಪುರ : ಮಗ ನೋಡಲು ತನ್ನಂತೆ ಇಲ್ಲ ಎಂಬ ಕಾರಣಕ್ಕೆ ಮಗನನ್ನೇ ಪಾಪಿ ತಂದೆ ಕೊಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ. ಮಲ್ಲಿಕಾರ್ಜುನ ಅರಕೇರಿ ಮಗನನ್ನೇ ಹತ್ಯೆ ಮಾಡಿದ ತಂದೆ. ಕಳೆದ ಮಾರ್ಚ್ 16ರಂದು ಪುತ್ರನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಮಲ್ಲಿಕಾರ್ಜುನ. 6 ವರ್ಷದ ಪುತ್ರ ಸಿದ್ದಾರ್ಥ ನೋಡಲು ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಕೆಲವರು ಪ್ರತಿನಿತ್ಯ ಪಾಪಿ ಮಲ್ಲಿಕಾರ್ಜುನನ್ನ ಚುಡಾಯಿಸಿದ್ದರಂತೆ. ಇದನ್ನ ಗಂಭೀರವಾಗಿ ಪರಿಗಣಿಸಿ ಮಲ್ಲಿಕಾರ್ಜುನ ಮಗ ಸಿದ್ಧಾರ್ಥನನ್ನ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿ ಬಳಿ ಕರೆದುಕೊಂಡು ಹೋಗಿ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಬಳಿಕ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್ನಲ್ಲಿ ಇಟ್ಟಿದ್ದಾಗಿ ಕುಟುಂಬಸ್ಥರಿಗೆ ಸುಳ್ಳು ಹೇಳಿದ್ದ. ಆದರೆ ಏಪ್ರಿಲ್ 1ರಂದು ಮಗನ ಹುಟ್ಟು ಹಬ್ಬದ ದಿನ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರಿ ಪಟ್ಟು ಹಿಡಿದಿದ್ದಾಳೆ. ಮಗ ಎಲ್ಲಿದ್ದಾನೆ ಎಂದು ಕೇಳಿದಾಗ ಮನೆಯಿಂದ ಮಲ್ಲಿಕಾರ್ಜುನ ಓಡಿ ಹೋಗಿದ್ದನಂತೆ. ಇದರಿಂದಾಗಿ ಅನುಮಾನ ಬಂದು ಪೊಲೀಸರಿಗೆ ತಾಯಿ ಭಾಗ್ಯಶ್ರೀ ದೂರು ನೀಡಿದ್ದಾಳೆ. ತದನಂತರ ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಮಲ್ಲಿಕಾರ್ಜುನ ಬಹಿರಂಗ ಪಡಿಸಿದ್ದಾನೆ.

17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು : 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 40 ವರ್ಷದ ಸುವರ್ಣ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಶರಣಾಗಿರುವ ತಾಯಿ. ಕಾರುಣ್ಯ ತಾಯಿಯಿಂದ ಹತ್ಯೆಯಾದ ಮಗಳು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.