ಬೆಳಗಾವಿ,ಡಿ.16:
ವಿಧಾನಪರಿಷತ್ ಅಧಿವೇಶನದಲ್ಲಿ ಮಾನ್ಯ ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ವಿಳಂಬ ಹಾಗೂ ಪರಿಸರ ಅನುಮತಿ ಇಲ್ಲದ ಸಮಸ್ಯೆಯನ್ನು ಗಂಭೀರವಾಗಿ ಸದನದ ಗಮನಕ್ಕೆ ತಂದರು.
ಕೆಐಎಡಿಬಿ 2016–17ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿದ್ದರೂ, ಮೂಲಸೌಕರ್ಯ ಒದಗಿಸದೇ ಮತ್ತು ಪರಿಸರ ಅನುಮತಿ ಪಡೆಯದೇ ಕೈಗಾರಿಕೋದ್ಯಮಿಗಳನ್ನು ವರ್ಷಗಳ ಕಾಲ ಕಾಯುವಂತೆ ಮಾಡಿರುವುದು ದುರಂತಕರವಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಸ್ಥಾಪಿತವಾಗಿರುವ ಕೆಐಎಡಿಬಿ ಇಂದು ಕೈಗಾರಿಕೆಗಳ ಬದಲಾಗಿ ರಿಯಲ್ ಎಸ್ಟೇಟ್ ಏಜೆಂಟ್ಗಳ ಅಡ್ಡೆಯಾಗಿದೆ ಎಂದು ಡಿ.ಎಸ್. ಅರುಣ್ ಕಿಡಿಕಾರಿದರು.
ಒಟ್ಟು 250 ಎಕರೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 180 ಕೈಗಾರಿಕೋದ್ಯಮಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ; ಕಾರ್ಯಾರಂಭ ಮಾಡಿದ 20 ಘಟಕಗಳಿಗೂ ಪರಿಸರ ಇಲಾಖೆ ಅನುಮತಿ ದೊರೆತಿಲ್ಲ, ಇದರಿಂದ ಕಳೆದ 10 ವರ್ಷಗಳಿಂದ ಕೈಗಾರಿಕೋದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರಿಸರ ಅನುಮತಿ ಶೀಘ್ರ ನೀಡುವುದು ಸರ್ಕಾರದ ಹೊಣೆಗಾರಿಕೆ ಎಂದು ಉಲ್ಲೇಖಿಸಿದ ಡಿ.ಎಸ್. ಅರುಣ್, ಈಗಾಗಲೇ ಕಾರ್ಯಾರಂಭಿಸಿರುವ ಕೈಗಾರಿಕೆಗಳ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉದ್ಯಮ ಸಚಿವ ಎಂ.ಬಿ. ಪಾಟೀಲ್, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ಅನುಮತಿ ಶೀಘ್ರ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದರು.