
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 64
-ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಮನುಷ್ಯನಿಗೆ ಭಗವಂತ ಎಂಬ ಶಕ್ತಿಯೊಂದು ಇದೆ ಎಂಬುದು ಇಲ್ಲದಿದ್ದರೆ, ಈತನೇ ಕಾಣದ ಹಾಗೂ ಕಾಪಾಡುವ ಭಗವಂತನಾಗಿ ಬಿಡುತ್ತಿದ್ದಾನೇನೋ? ಸಾವೆಂಬುದು ಇಲ್ಲದಿದ್ದರೆ ಅಥವಾ ಅದು ಬರುವುದು ಇಂತಹ ದಿನ ಎಂದು ಗೊತ್ತಿದ್ದರೆ, ನಿಜಕ್ಕೂ ಮನುಷ್ಯನ ಮನ ಭಗವಂತನಂತೆ ಕುಣಿದಾಡುತ್ತಿತ್ತೇನೋ ಎನಿಸುತ್ತದೆ.
ಒಳ್ಳೆಯದಾದರೆ ನನ್ನಿಂದ ಆಯಿತು ಎನ್ನುವ ಈ ಬಹಳಷ್ಟು ಮನಸುಗಳು ಕೆಟ್ಟದ್ದಾದರೆ, ಭಗವಂತ ನಮಗೆ ಬರೆದಿದ್ದ ಎಂದು ಹೇಳುವ ಪದ್ಧತಿ ನಮ್ಮ ನಡುವೆ ಈಗಲೂ ಗಂಭೀರ ಸ್ವರೂಪದಲ್ಲಿದ್ದರೂ ಸಹ ಅದನ್ನು ನಾವು ಪರಿಗಣಿಸದ ಹಾಗೂ ಆ ಬಗೆಯಲ್ಲಿ ಚಿಂತಿಸದ ರೀತಿಯಲ್ಲಿದ್ದೇವೆ. ಮುಂದೆ ಆಗೋದನ್ನ ತಪ್ಪಿಸೋಕೆ ನಾವೇನ್ ದೇವರಾ? ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ವಿಷಯ.

ಬಹಳಷ್ಟು ಮನಸ್ಥಿತಿಗಳು ತಮ್ಮನ್ನು ತಾವು ಬೆನ್ನು ತಟ್ಟಿಕೊಳ್ಳುವ ಹೊಗಳಿಕೊಳ್ಳುವ ವೇದಾಂತಿಯಂತಾಡುವ ರೀತಿಯಲ್ಲಿ ವರ್ತಿಸುತ್ತವೆ. ನಾನು ಹೇಳಿದ್ದೆ ವೇದ ವಾಕ್ಯ ಎನ್ನುವಂತಹ ಮನೋಭಾವ ಬಹಳಷ್ಟು ಜನರಲ್ಲಿ ಕಂಡು ಬರುತ್ತದೆ. ಇದು ಇನ್ನೊಬ್ಬರ ಮನೋಸ್ಥಿತಿಯನ್ನ ಸಂಪೂರ್ಣವಾಗಿ ಕೊಂದುಬಿಡುತ್ತದೆಂಬ ಕಲ್ಪನೆಯೇ ಕೆಲವರಲ್ಲಿ ಇಲ್ಲದಿರುವುದೇ ದುರಂತ.
ಪದೇ ಪದೇ ಇನ್ನೊಬ್ಬರನ್ನು ಕೆದಕುತ್ತಾ ಇನ್ನೊಬ್ಬರ ಮೈಹುರಿಸುವ ಕೆಲವರ ಕಾಯಕ ಸಾಕಷ್ಟ ಮುಗ್ಧ ಮನಸುಗಳನ್ನು ನಿರ್ನಾಮ ಮಾಡಿಬಿಡುತ್ತದೆ ಅಲ್ಲವೇ ಒಟ್ಟಾರೆ ಇನ್ನೊಬ್ಬರ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕೆಲವೇ ಕೆಲವು ಮನಸುಗಳು ಬದಲಾಗಬೇಕಿದೆ ಎಂಬುದು ಬಹಳಷ್ಟು ಮನಸ್ಸುಗಳ ಮಾತು.

ಚಳಿಗಾಲದ ಹೊತ್ತಿನಲ್ಲಿ ಮುಂಜಾನೆ ಮನೆಯ ನೀರೊಲೆಯ ಮುಂದೆ, ಬೀದಿಯಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವ ಪರಿಪಾಠ ಈಗಲೂ ಕೆಲವೆಡೆ ಕಂಡು ಬರುತ್ತಿದೆ. ಆದರೆ, ಹಿಂದಿದ್ದ ಆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಚಳಿಯಲ್ಲೂ ಎಸಿ ಯಲ್ಲಿ ಮಲಗುವ ಪರಿಪಾಠ ಹಲವರಲ್ಲಿ ಬೆಳೆದಿರೋದು ಅಬ್ಬಾ ಅನಿಸುತ್ತದೆ. ಆ ಚಳಿ ಕಾಯಿಸಿಕೊಳ್ಳುವ ಅಂದಿನ ವರ್ತನೆ ಇಂದಿನ ಕೆಲವರಿಂದ ಬೇರೆಯವರ ಬದುಕಿಗೇ, ಮನೆಗೆ ಬೆಂಕಿ ಹಾಕಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವ ಪರಿಪಾಠ ನಡೆಯುತ್ತಿದೆ. ಕಾಣದ ಭಗವಂತನೂ ಅವರಿಗೂ ಕಾಣದಿರುವುದೇ ದುರಂತವಂತೇ ಹೌದಾ?
ವಿಷಯ ಎತ್ತವು ಸಾಗುತ್ತಿಲ್ಲ ಇಲ್ಲಿ ಒಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ, ಕಾಣದ ಹಾಗೂ ಇದೆ ಎಂದು ನಂಬುವ, ನಮ್ಮನ್ನು ಸಲಹುವ ಭಗವಂತನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಆಸ್ತಿಕ ನಾಸ್ತಿಕ ಎಂಬ ಪದಗಳ ಬಳಕೆ ಇಲ್ಲಿ ಅನಗತ್ಯ ಅನಿಸುತ್ತದೆ. ಅವ ನಾಸ್ತಿಕ ಎಂದು ಬಹಿರಂಗವಾಗಿ ಹೇಳಿಕೊಂಡರೂ, ಆತನ ಮನದ ಮೂಲೆಯಲ್ಲಿ ಒಂದು ಶಕ್ತಿ ಇರುತ್ತದೆ. ಆ ಶಕ್ತಿಗೆ ಸದಾ ಆತ ಮನದಲ್ಲೇ ನಮಿಸುತ್ತಿರುತ್ತಾನೆ. ಏಕೆಂದರೆ ನಾಸ್ತಿಕ ಎಂದುಕೊಳ್ಳುವ ಘೋಷಿಸಿಕೊಳ್ಳುವ ವ್ಯಕ್ತಿ ಸಮಾಜದ ಮುಖವಾಣಿಯಲ್ಲಿ ಹೇಗೇ ಬಿಂಬಿತವಾದರೂ ಅವನ ಮನದೊಳಗೊಂದು ಕಾಣದ ಶಕ್ತಿಯೇ ಭಗವಂತ ಎಂಬ ವಾಕ್ಯ ಸಾಕಷ್ಟು ಕಡೆ ಕೇಳಿದ್ದೇವಲ್ಲವೇ?
ಒಟ್ಟಾರೆ ಈ ಬದುಕಲ್ಲಿ ನಮ್ಮ ನಮ್ಮ ನಡುವೆ ನೂರೆಂಟು ವಿಘ್ನಗಳಿರಬಹುದು. ಆದರೆ ಅವುಗಳಿಗೆ ಪರಿಹಾರ ಹುಡುಕುವ ಹಾಗೂ ವಿಘ್ನಗಳನ್ನು ಓಡಿಸುವ ಪರಿಕಲ್ಪನೆ ಬೆಳೆಸಿಕೊಳ್ಳಬೇಕಿದೆ, “ಮನಸೇ ದಯಮಾಡಿ ಬದಲಾಗು”