ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಇಬ್ಬರೂ ಸೇರಿಕೊಂಡು ಕಾಂಗ್ರೆಸ್ನ್ನು ವಿಸರ್ಜನೆ ಮಾಡಲು ಹೊರಟಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅಭಿವೃದ್ಧಿಯ ಪ್ರಶ್ನೆಯೇ ಇಲ್ಲವಾಗಿದೆ. ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಆರಂಭವಾಗಿದೆ. ಇಡೀ ರಾಷ್ಟ್ರದಲ್ಲಿ ಕರ್ನಾಟಕ ಮತ್ತು ತೇಲಾಂಗಣ ಈ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಉಸಿರಾಡುತ್ತಿದೆ. ಈಗ ಕರ್ನಾಟಕದಲ್ಲೂ ಕಾಂಗ್ರೆಸ್ಸಿಗೆ ಕುತ್ತು ಬಂದಿದೆ. ಅಧಿಕಾರದ ಜಗ್ಗಾಟದಲ್ಲಿ ಇಬ್ಬರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಡಿದಾಡತೊಡಗಿದ್ದಾರೆ. ಈ ಇಬ್ಬರೂ ಸೇರಿಕೊಂಡು ಕಾಂಗ್ರೆಸ್ನ್ನೇ ವಿಸರ್ಜನೆ ಮಾಡಲು ಹೊರಟಿದ್ದಾರೆ. ಈಗಾಗಲೇ ಜನ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಕಳಚಿಬೀಳುತ್ತದೆ ಎಂದರು.

ಕುವೆಂಪು ವಿವಿಯಲ್ಲಿ ಇತ್ತೀಚೆಗೆ ನಡೆದ ಭಗವದ್ಗೀತೆ ಕಾರ್ಯಕ್ರಮವನ್ನು ಕೆಲವರು ವಿರೋಧಿಸಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಭಗವದ್ಗೀತೆಯವನ್ನು ವಿರೋಧಿಸುವವರು ಅದನ್ನು ಸರಿಯಾಗಿ ಓದಿಲ್ಲ. ಅದನ್ನು ಓದಿದರೆ ಅವರ ಪ್ರಶ್ನೆಗಳಿಗೆ ಗೀತೆಯೇ ಉತ್ತರ ಕೊಡುತ್ತದೆ. ಭಗವದ್ಗೀತೆಗೆ ಯಾವುದೇ ಮಡಿವಂತಿಕೆಯೂ ಇಲ್ಲ. ಈಗ ಅದನ್ನು ವಿರೋಧಿಸುವವರು ಜೊತೆ ಮಾತನಾಡಿ ಅವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.