ಶಿವಮೊಗ್ಗ : ನಾಳೆ ಪ್ರಧಾನಿ ನರೇಂದ್ರಮೋದಿಯವರ ೭೫ನೇ ಜನ್ಮದಿನಾಚರಣೆಯ ಅಂಗವಾಗಿ ಸ್ವಸ್ತನಾರಿ ಸಶಕ್ತ ಪರಿವಾರ ಅಭಿಯಾನವನ್ನು ಸೆ.೧೭ರಿಂದ ಅಕ್ಟೋಬರ್ ೨ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ವಿಶ್ವನಾಯಕರಾಗಿ ಸ್ವಚ್ಛ ಭಾರತದಿಂದ ಡಿಜಿಟಲ್ ಭಾರತದವರೆಗೆ ದೇಶದಲ್ಲಿ ಅನೇಕ ಸುಧಾರಣೆಯನ್ನು ತಂದಿದ್ದಾರೆ. ಭಾರತಕ್ಕೆ ಅವರ ಅಮೂಲ್ಯ ನಾಯಕತ್ವದಿಂದಾಗಿ ಅನುಕೂಲವಾಗಿದ್ದು, ನಾವೆಲ್ಲರೂ ಅವರ ಹುಟ್ಟಿದ ಹಬ್ಬವನ್ನು ಹೆಮ್ಮೆಯಿಂದ ಆಚರಣೆ ಮಾಡೋಣ ಎಂದರು.

ಕೋವಿಡ್ನಿಂದಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಜರ್ಜಿರಿತವಾದಾಗ ದೇಶವನ್ನು ಶಶಕ್ತವಾಗಿ ಮುನ್ನಡೆಸಿ, ಜಿಡಿಪಿಯಲ್ಲಿ ಹೆಚ್ಚಳ ಆಗಿದ್ದಲ್ಲದೆ ವಿಶ್ವಾಸಾರ್ಹವಾಗಿ ಭಾರತವನ್ನು ಮುನ್ನಡೆಸಿದರು. ನಾರಿಯರು ಸಶಕ್ತರಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣಕ್ಕೆ ಒತ್ತು ನೀಡಬೇಕೆಂದು ಚಿಂತಿಸಿ ಇದರ ಮುಖಾಂತರ ವಿಕಸಿತ ಭಾರತದ ಗುರಿ ಮುಟ್ಟಲು ಈ ಅಭಿಯಾನವನ್ನು ಹಮ್ಮಿಕೊಂಡಿದ್ದು ನಾಳೆ ಮಧ್ಯಪ್ರದೇಶದ ಇಂಧೋರ್ನಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ರಾಷ್ಟ್ರಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಲ್ಇಡಿಯಲ್ಲಿ ವರ್ಚ್ಯುಯಲ್ ಮುಖಾಂತರ ವೀಕ್ಷಿಸಬಹುದಾಗಿದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರಗಳು, ಕಾಮನ್ ಹೆಲ್ತ್ ಸೆಂಟರ್ ಹಾಗೂ ಪ್ರಮುಖ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಳೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ನಗರದ ತುಂಗಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ ೧೨ಗಂಟೆಗೆ ಆರೋಗ್ಯ ಶಿಬಿರದ ಉದ್ಘಾಟನೆಯಾಗಲಿದೆ ಎಂದರು.

ನಾಳೆಯಿಂದ ಅ.೨ರವರೆಗೆ ಏಳು ಕೇಂದ್ರಗಳಲ್ಲಿ ವಿಶೇಷವಾಗಿ ಆರೋಗ್ಯ ತಪಾಸಣೆ, ಸ್ತ್ರೀಯರಿಗಾಗಿ ಕ್ಯಾನ್ಸರ್ ಸಂಬಂಧಿತ ತಪಾಸಣೆ, ರಕ್ತದಾನ ಶಿಬಿರ, ಡೆಂಟಲ್ ಚಕಪ್, ನಡೆಯಲಿದೆ. ಆರೋಗ್ಯವಂತ ಸಮಾಜಕ್ಕಾಗಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಸೆ.೨೬ರಂದು ಆನವಟ್ಟಿ, ಸೆ.೨೪ರಂದು ಆಯನೂರು, ಸೆ.೨೬ರಂದು ಹೊಳಲೂರು, ಸೆ.೧೯ರಂದು ಆನಂದಪುರ, ಸೆ.೨೨ರಂದು ಶಿರಾಳಕೊಪ್ಪ, ಸೆ.೧೭ರಂದು ಹೊಳೆಹೊನ್ನೂರು, ಸೆ.೨೬ರಂದು ಕನ್ನಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಶಿಬಿರ ನಡೆಯಲಿದೆ ಎಂದರು. ಸ್ತ್ರೀಯರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಬಾನುಮುಸ್ತಾಕ್ ಅವರು ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅವರಿಂದ ಉದ್ಘಾಟನೆಯನ್ನು ನಾವು ವಿರೋಧಿಸಿದ್ದೇವು ಎಂದರು.
ಗಣಪತಿ ಮೆರವಣಿಗೆಯಲ್ಲಿ ಡಿಜೆಗೆ ಅನುಮತಿ ನೀಡದ ಜಿಲ್ಲಾಡಳಿತ ನಿನ್ನೆಯ ಮೆರವಣಿಗೆಗೆ ನೂರಾರು ಡಿಜೆಗಳಿಗೆ ಅನುಮತಿ ನೀಡಿದ್ದು ವಿಪರ್ಯಾಸ. ದೇಶದಲ್ಲಿ ಇರುವುದು ಒಂದೇ ಕಾನೂನು ಎಂದರು.
ಅವರು ಹಬ್ಬ ಮಾಡಲಿ, ನಮ್ಮದೇನೂ ವಿರೋಧವಿಲ್ಲ ಆದರೆ ವಿಭಿನ್ನ ಕಾನೂನು ಏಕೆ ? ರಾಜ್ಯ ಸರ್ಕಾರ ತುಷ್ಠೀಕರಣ ನೀತಿಯನ್ನು ಇನ್ನಾದರೂ ಕೈಬಿಡಲಿ ಎಂದರು.
ಪಾಕಿಸ್ತಾನ-ಭಾರತ ಕ್ರಿಕೇಟಿಗೆ ಸಂಬಂಧಿಸಿದಂತೆ ಇದು ಅಂತರಾಷ್ಟ್ರೀಯ ತೀರ್ಮಾನ. ಇದನ್ನು ಭಾರತ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದರು.
ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಸೆ.೧೭ರಿಂದ ಅ.೨ರ ವರೆಗೆ ಮೂರು ಮಹಾನ್ ನಾಯಕರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಸೇವೆ ಮಾಡುತ್ತಾ, ಪಕ್ಷದ ಸಂಘಟನೆ ಮಾಡುತ್ತಾ ಇದ್ದೇವೆ. ಸೆ.೨೫ರಂದು ದೀನ್ ದಯಾಳ್ ಉಪಾಧ್ಯ, ಅ.೨ರಂದು ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ಧೂರ್ ಶಾಸ್ತ್ರೀ ಮತ್ತು ಸೆ.೧೭ರಂದು ನರೇಂದ್ರಮೋದಿಯವರ ಹುಟ್ಟುಹಬ್ಬವಿದ್ದು ಈ ನಾಲ್ಕೂ ನಾಯಕರ ರಾಷ್ಟ್ರಸೇವೆಯನ್ನು ಸ್ಮರಿಸಿ, ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ಯುವಮೋರ್ಚಾದಿಂದ ರಕ್ತದಾನ ಶಿಬಿರ, ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿದ್ದೇವೆ. ಸೆ.೨೭ರಂದು ರಾಷ್ಟ್ರದ ೧೦೦ ನಗರಗಳಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಮೋದಿ ವಿಕಾಸ್ ಮ್ಯಾರಾಥಾನ್ನನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮವಿದ್ದು, ಎಲ್ಲಾ ಮಂಡಲಗಳಲ್ಲಿ ಆತ್ಮ ನಿರ್ಬರ್ ಮತ್ತು ವಿಕಸಿತ ಭಾರತದ ಕಲ್ಪನೆಯ ಅಡಿಯಲ್ಲಿ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಸೆ.೨೫ರಂದು ಪಂ. ದೀನ್ ದಯಾಳ್ ಉಪಾಧ್ಯ ಹುಟ್ಟಿಹಬ್ಬದ ಅಂಗವಾಗಿ ಖಾದಿಮೇಳ ಪ್ರದರ್ಶನ ಮತ್ತು ಮಾರಾಟವನ್ನು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ.ಎಸ್. ಅರುಣ್, ಪ್ರಮುಖರಾದ ಮೋಹನ್ರೆಡ್ಡಿ, ಪ್ರಶಾಂತ್ ಕುಕ್ಕೆ, ಮಾಲತೇಶ್, ಗಿರೀಶ್ ಭದ್ರಾವತಿ, ಚಂದ್ರಶೇಖರ್, ಸುರೇಶ್, ಅಣ್ಣಪ್ಪ ಮೊದಲಾದವರಿದ್ದರು.