ಶಿವಮೊಗ್ಗ,ಸೆ.17:
ರಾಜ್ಯಾದ್ಯಂತ ದಸರಾ ರಜೆಯಲ್ಲಿ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜವಾಬ್ದಾರಿ ನೀಡಲಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ಆರಂಭಗೊಂಡಿದೆ. ಶಿವಮೊಗ್ಗ ತಾಲೂಕಿನ 1150 ಹೆಚ್ಚು ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅನಿವಾರ್ಯ ಕಾರಣ ಹೊರತುಪಡಿಸಿ ಉಳಿದ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂಬಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ನಡುವೆ ಶಿಕ್ಷಕರ ಜಿಲ್ಲಾ ಸಂಘ ನೆಪ ಮಾತ್ರಕ್ಕೆ ಎಂಬಂತೆ ಈಗ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಸಿದ್ದ ನಡೆಸಿದ್ದ ಶಿಕ್ಷಕರ ಗೌರವ ಸಂಭಾವನೆ ಹಾಗೂ ಅವರಿಗೆ ನೀಡಬೇಕಿದ್ದ ಗಳಿಕೆ ರಜೆ ಬಗ್ಗೆ ಈಗ ಧ್ವನಿ ಎತ್ತಿರುವುದು ಅತ್ಯಂತ ವಿಶೇಷವಾಗಿದೆ. ಇಲ್ಲಿಯವರೆಗೆ ಕೇವಲ ತನ್ನಷ್ಟಕ್ಕೆ ತಾನು ಎಂಬಂತಿದ್ದ ಹಾಗೂ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಇಂತಹ ವಿಷಯಗಳಲ್ಲಿ ಬೇಕಿದ್ದವರ ಪರ ಧ್ವನಿ ಎತ್ತುತ್ತಿದ್ದ ಆರೋಪ ಹೊತ್ತಿದ್ದಂತಹ ಜಿಲ್ಲಾ ಶಿಕ್ಷಕರ ಸಂಘ ಈಗ ಹಳೆಯ ಗೌರವ ಸಂಭಾವನೆ ಹಾಗೂ ಗಳಿಕೆ ರಜೆಯ ಕುರಿತು ಮಾತನಾಡುತ್ತಿರುವುದು ನಿಜಕ್ಕೂ ವಿಚಿತ್ರವೆನಿಸುತ್ತಿದೆ.

ಈ ಸಮೀಕ್ಷೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಅವರಿಗೆ ಇರುವ ಕೆಜೆಐಡಿ ನಂಬರ್ ಆಧಾರದಲ್ಲಿ ಈ ಗಣತಿ ನಡೆಯುತ್ತಿದ್ದು, ಇದರಲ್ಲಿ ಪ್ರೌಢಶಾಲಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಶಿಕ್ಷಕರನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಅವರು ಹೇಳಿದ್ದಕ್ಕೆಲ್ಲ ಹೂ ಎನ್ನುವವರು ಎಂದು ಸರ್ಕಾರ ಹಾಗೂ ಶಿಕ್ಷಕರ ಸಂಘಗಳು ತಿಳಿದುಕೊಂಡಿವೆಯೇ ಎನಿಸುತ್ತದೆ ಅಲ್ಲವೇ?

ಇಲ್ಲಿಯವರೆಗೆ ಶಿಕ್ಷಕರ ಕುರಿತಾದ ಯಾವುದೇ ವಿಷಯಗಳನ್ನು, ನೋವುಗಳನ್ನು ಗಮನಿಸಿ ಸ್ಪಂದಿಸದ ಜಿಲ್ಲಾ ಸಂಘ ಈಗ ಎಚ್ಚೆತ್ತಿರುವುದು ಬರುವ ಚುನಾವಣೆಯ ಉದ್ದೇಶದಿಂದಲೇ ಅಥವಾ ಅಧಿಕಾರದ ಲಾಲಸೆಗೆ ಕಾರಣವೇ ಎಂಬ ಅನುಮಾನ ಶಿಕ್ಷಕ ವರ್ಗದಲ್ಲೇ ಮೂಡಿದೆ.
ಈಗಿನ ಸಮೀಕ್ಷೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಕೈ ಬಿಡುವಂತೆ ಮನವಿ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಅಂದರೆ ಸಂಘದ ಪದಾಧಿಕಾರಿಗಳಾದರೆ ಮಾತ್ರ ಅವರಿಗೆ ಎಲ್ಲದಕ್ಕೂ ರಿಯಾಯಿತಿ ಸಿಗಬೇಕಾ? ನೊಂದು ಆರೋಗ್ಯದ ಸಮಸ್ಯೆಯಲ್ಲಿರುವ ಅದೆಷ್ಟೋ ಶಿಕ್ಷಕರಿಗೆ ಈ ಸಮಸ್ಯೆ ಕಾಡಲೇಬೇಕಾ? ಅಂತಹ ನಿಟ್ಟಿನಲ್ಲಿ ಜಿಲ್ಲಾ ಸಂಘ ಮಾಡಿದ ಕಾರ್ಯಕ್ರಮವಾದರೂ ಏನು ಎಂಬುದು ಪಬ್ಲಿಕ್ ಟೀಚರ್ಸ್ ಪ್ರಶ್ನೆ.