ಶಿಕಾರಿಪುರ ಏ 27 :- ಕೊರೋನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದ ತಾಲ್ಲೂಕಿನ ಸುಪ್ರಸಿದ್ಧ ಆರಾಧ್ಯ ದೈವ ಶ್ರೀ ಹುಚ್ಚರಾಯ ಸ್ವಾಮಿ ರಥೋತ್ಸವ ಹಾಗೂ ಪೂಜಾ ವಿಧಿ ವಿಧಾನಗಳು ನಡೆದವು. ರಾಜ್ಯದ ವಿವಿಧ ಭಾಗಗಳಲ್ಲಿ ಸಹಸ್ರಾರು ಭಕ್ತರನ್ನು ಹೊಂದಿರುವ ಶ್ರೀ ಹುಚ್ಚರಾಯ ಸ್ವಾಮಿಗೆ ವಿವಿಧ ರೀತಿಯ ಪೂಜಾ ವಿಧಿ ವಿಧಾನಗಳು ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ನಡೆಸಲಾಯಿತು.
ಕಳೆದ ವರ್ಷ ಪ್ರಥಮವಾಗಿ ಆರಂಭವಾಗಿದ್ದ ಇದೇ ಕೊರೋನದಿಂದ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿಂದ ಎರಡನೇ ಹಂತದ ಕೊರೋನ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ನೂತನ ಮಾರ್ಗಸೂಚಿ ಅನುಸರಿಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ, ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಚೀವರ ಆದೇಶದನ್ವಯ ತಾಲ್ಲೂಕು ಆಡಳಿತ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಸಂಪೂರ್ಣವಾಗಿ ಕಟ್ಟುನಿಟ್ಟಿನಲ್ಲಿ ನಿಷೇಧಿಸಲಾಗಿತ್ತು.
ಈ ಬಾರಿಯೂ ಕೂಡ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ತಿಳಿದು ಅನೇಕ ಭಕ್ತರಲ್ಲಿ ಇದೇರೀತಿ ಮುಂದೆಯೂ ಕೂಡಾ ಶ್ರೀ ಹುಚ್ಚರಾಯ ಸ್ವಾಮಿ ರಥೋತ್ಸವ ರದ್ದುಗೊಳಿಸುತ್ತಾ ಹೋದರೆ ಮುಂದೇನು ಗತಿ ಕಾದಿದೆಯೋ ಎಂಬ ಆತಂಕ ಮನೆಮಾಡಿತ್ತು. ಭಕ್ತರ ನಂಬಿಕೆಗೆ ಚ್ಯುತಿ ಬಾರದಂತೆ ಅತ್ಯಂತ ಎಚ್ಚರಿಕೆ ವಹಿಸಿದ ಕಂದಾಯ ಇಲಾಖೆ, ಪೋಲೀಸ್ ಇಲಾಖೆಯ ಅಧಿಕಾರಿಗಳು ಆಡಳಿತ ಸಿಬ್ಬಂದಿಗಳು ಸರ್ಕಾರದ ಆದೇಶದ ಮೇರೆಗೆ ಮಾರ್ಗಸೂಚಿ ಅನುಸರಿಸುವುದರ ಜೊತೆಗೆ ಆಗಮಿಸುವ ಭಕ್ತರನ್ನು ತಡೆಯಲು ಕಷ್ಟಕರವಾದರೂ, ಹರ ಸಾಹಸದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು ಎನ್ನಲಾಗಿದೆ.
ಆಗಮಿಸಿದ್ದ ಪ್ರತಿಯೊಬ್ಬ ಭಕ್ತರೂ ಸರ್ಕಾರದ ಮಾರ್ಗಸೂಚಿಯಾದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ್ ಧರಿಸುವುದರ ಮೂಲಕ ದೇವಸ್ಥಾನದಲ್ಲಿ, ಶ್ರೀ ಹುಚ್ಚರಾಯ ಸ್ವಾಮಿಗೆ ಗದಾಹಸ್ತನಾಗಿ ಕುಳಿತಿರುವಂತೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಬ್ರಹ್ಮ ರಥಕ್ಕೆ ಅಷ್ಟದಿಕ್ಪಾಲಕರಿಗೆ ನಿಯಮಾನುಸಾರ ಪೂಜೆ ಸಲ್ಲಿಸುವುದರ ಮೂಲಕ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು ಎನ್ನಲಾಗುತ್ತಿದೆ.
ಈ ಪೂಜಾ ವಿಧಿ ವಿಧಾನಗಳಲ್ಲಿ ಅರ್ಚಕರಾದ ಉಮೇಶ್ ಭಟ್, ಗಣಪತಿ ಭಟ್, ಹರೀಶ್ ಭಟ್, ಅಂಜನ್ ಭಟ್, ಪ್ರದೀಪ್ ಕುಲಕರ್ಣಿ (ಪಿಂಟು), ಪಿ ಬಿ ಮಂಜುನಾಥ್(ಜಿದ್ದು), ಹೆಚ್ ಕೆ ಪ್ರಕಾಶ್, ಪಾಂಡು, ವೆಂಕಣ್ಣ, ತಾಲ್ಲೂಕು ತಹಶೀಲ್ದಾರ್ ಕವಿರಾಜ್ ಎಂ ಪಿ, ಟೌನ್ ಪಿಎಸ್ಐ ರಾಜು ರೆಡ್ಡಿ, ಸೇರಿದಂತೆ ಕಂದಾಯ ಇಲಾಖೆಯ ಪೋಲೀಸ್ ಇಲಾಖೆಯ ಅಧಿಕಾರಿಗಳು ಆಡಳಿತ ಸಿಬ್ಬಂದಿಗಳು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.