ನಗರದ ಎಲ್ಲಾ ಹೊರ ಭಾಗದ ಪ್ರಮುಖ ರಸ್ತೆಗಳಲ್ಲಿ ಇಂದು ಸಂಜೆಯಿಂದಲೆ ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗುವುದು. ಈಗಾಗಲೇ ಬಾರ್ಡರ್‌ಗಳಲ್ಲಿ ವಾಹನಗಳು ಇಲ್ಲಿಂದ ಬರುತ್ತವೆ. ಇಲ್ಲಿಗೆ ಹೋಗುತ್ತವೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಕುಡಿಯಲು ಅವಕಾಶವೇ ಇಲ್ಲ. ಬಾರ್ ಅಕ್ಕಪಕ್ಕದಲ್ಲಿ ಕುಡಿದರೂ ಕೂಡ ಕೇಸ್ ದಾಖಲಿಸಿಕೊಳ್ಳಲಾಗುವುದು. ವೈನ್ ಸ್ಟೋರ್‌ನಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರವೇ ಅವಕಾಶವಿದೆ. –ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್
ಶಿವಮೊಗ್ಗ: ಸರ್ಕಾರದ ಸೂಚನೆಯಂತೆ ಇಂದು ಸಂಜೆಯಿಂದಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯ ಸೇವೆ ಬಿಟ್ಟು ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಆಗಲಿವೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಇಂದು ಸಂಜೆಯಿಂದಲೆ ಜನತಾ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 9 ಗಂಟೆಯಿಂದ ಇದು ಆರಂಭವಾಗುತ್ತದೆ. ನಾಳೆಯಿಂದ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಾರ್ವಜನಿಕರು, ಹಾಲು,ದಿನಸಿ ಇತ್ಯಾದಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಅನಂತರ ಯಾವುದೇ ಕಾರಣಕ್ಕೂ ರಸ್ತೆಗಿಳಿಯುವಂತಿಲ್ಲ. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಸಾರ್ವಜನಿಕರು ಆಸ್ಪದ ಕೊಡಬಾರದು. ಪೊಲೀಸರೊಂದಿಗೆ ಸಹಕರಿಸಬೇಕು. ವಿನಾಕಾರಣ ರಸ್ತೆಗಿಳಿಯಬೇಡಿ ಎಂದು ಎಚ್ಚರಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಸಭೆ, ಸಮಾರಂಭ ಇರುವುದಿಲ್ಲ. ಆದರೆ ಈಗಾಗಲೇ ನಿಗದಿಪಡಿಸಿದ ಮದುವೆ ಕಾರ್ಯಗಳಿಗೆ ಕೇವಲ 50 ಜನರು ಮಾತ್ರ ಭಾಗವಹಿಸಬೇಕಾಗಿದೆ ಮತ್ತು ಇದಕ್ಕೆ ಅನುಮತಿ ಪಡೆಯವುದು ಕಡ್ಡಾಯವಾಗಿದೆ ಹಾಗೂ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವವರು 5 ಕ್ಕಿಂತ ಹೆಚ್ಚು ಜನ ಇರಬಾರದು ಎಂದರು.
ಶನಿವಾರ, ಭಾನುವಾರಗಳಂತೆಯೇ ವಾರದ ಎಲ್ಲಾ ದಿನಗಳಲ್ಲಿಯೂ ಲಾಕ್‌ಡೌನ್ ಇರುತ್ತದೆ. ಕಾಮಗಾರಿ ಕೆಲಸಗಳು, ಕೃಷಿ ಸಂಬಂಧಿತ ಕೆಲಸಗಳಿಗೆ ವಿನಾಯಿತಿ ನೀಡಲಾಗಿದೆ. ಅದನ್ನು ಬಿಟ್ಟು ಏನೂ ಮಾಡುವ ಹಾಗಿಲ್ಲ. ಯಾವುದೇ ಜಾತ್ರೆ, ಊರ ಹಬ್ಬಗಳು, ಧಾರ್ಮಿಕ ಹಬ್ಬಗಳು ಆಚರಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಕಂಡಿತವಾಗಿಯೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಾರೆ. ಕೇಸ್ ದಾಖಲಿಸಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ನಿನ್ನೆ ಮತ್ತು ಮೊನ್ನೆ ನಾವು ಸುಮಾರು 58ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 300ಕ್ಕೂ ಹೆಚ್ಚು ಸಾರ್ವಜನಿಕರ ಮೇಲೆ ವಿವಿಧ ಕಾರಣಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಕಳೆದ 3 ದಿನಗಳಲ್ಲಿ ಮಾಸ್ಕ್ ಧರಿಸದ 1500 ಸಾವಿರ ಜನರ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪ್ರತಿದಿನ ವಿವಿಧ ಉಲ್ಲಂಘನೆಗಾಗಿ ಸಾವಿರಕ್ಕೂ ಹೆಚ್ಚು ಕೇಸ್‌ಗಳನ್ನು ಜಿಲ್ಲೆಯಲ್ಲಿ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ ಎಂದರು.