ಸಾಗರ : ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಮನೆಮನೆಗೆ ಪೊಲೀಸ್ ಸೇವೆ ಜಾರಿಗೆ ತರಲಾಗಿದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ತಿಳಿಸಿದರು.

ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಉತ್ತಮ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಸಮುದಾಯದ ಜೊತೆ ಪೊಲೀಸ್ ಇಲಾಖೆ ಸೌಹಾರ್ದತೆ ಸಾಧಿಸುವುದರಿಂದ ಆಗುವ ಅಪಾಯವನ್ನು ತಡೆಗಟ್ಟಲು ಸಾಧ್ಯವಿದೆ. ಜೊತೆಗೆ ಘಟಿಸಿದ ಅಪರಾಧಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶ ಹೊಂದಿದೆ ಎಂದರು.

ಸಮಾಜಕ್ಕೆ ಉತ್ತಮ ಸಕ್ರಿಯ ಪೊಲೀಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮಹತ್ವಾಕಾಂಕ್ಷೆಯ ಮನೆಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ಸಾರ್ವಜನಿಕರು ಮತ್ತು ಪೊಲೀಸರು ಒಟ್ಟಾಗಿ

ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸ್ಥಳೀಯ ಪೊಲೀಸರು ಮನೆಗಳಿಗೆ ತೆರಳಿ ತಮ್ಮೊಡನೆ ಸಂವಾದಿಸಲಿದ್ದು ಸಾರ್ವಜನಿಕರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.