ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ, ಜು.೦೧:
ಇತ್ತೀಚಿನ ದಿನಗಳಲ್ಲಿ ೨೦ ರಿಂದ ೪೦ವರ್ಷದ ವಯಸ್ಸಿನ ಯುವ ಹೃದಯಗಳ ಸ್ತಂಬನ ಆಗಿದೆ.
ಈಗ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚಿತವಾಗುತ್ತಿರುವ ಹಾಗೂ ಹೆಚ್ಚು ಯುವಕರನ್ನು ಬಲಿ ತೆಗೆದುಕೊಂಡ ಹಾರ್ಟ್ ಅಟ್ಯಾಕ್ ಈಗ ಶಿವಮೊಗ್ಗದಲ್ಲೂ ತನ್ನ ಕೆಟ್ಟ ಹೆಜ್ಜೆಗಳನ್ನು ಇಡುತ್ತಿದೆ ಎಂಬುದನ್ನು ಹಲವು ಯುವ ಹೃದಯಗಳ ಅಘಾತಗಳ ನಡುವಿನ ಕಥನಗಳಿಂದ ಭಯ ಹುಟ್ಟಿಸುತ್ತಿದೆ. ಯುವಕರು ಹೃದಯಘಾತಕ್ಕೆ ಬಲಿಯಾಗಿರುತ್ತಿರುವ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಈ ಹೃದಯಘಾತಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ನಿಖರ ಕಾರಣ ತಿಳಿಸುವಂತೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ರವೀಂದ್ರ ನಾಥ ನೇತೃತ್ವದ ತಜ್ಞರ ಸಮಿತಿಗೆ ಆರೋಗ್ಯ ಇಲಾಖೆ ಆದೇಶಿಸಿರುವುದು ಸ್ವಾಗತಾರ್ಹ.
ಹೃದಯಘಾತಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ ತಿಂಗಳ ಕೊನೆಯ ಎರಡು ವಾರದಲ್ಲಿ ನಾಲ್ವರು ಬಲಿಯಾಗಿರುವ ಘಟನೆ ವರದಿಯಾಗಿದೆ.

ಕಳೆದ ಜೂ.೨೯ರ ಭಾನುವಾರ ಮತ್ತು ಜೂ.೩೦ರ ಸೋಮವಾರದ ಈ ಎರಡು ದಿನದಲ್ಲಿ ೨೧ ವರ್ಷದ ಯುವಕ, ೨೩ ವರ್ಷದ ವಿವಾಹಿತ ಮಹಿಳೆ ಮತ್ತು ವೈದ್ಯರೋರ್ವರು ಹಾಗೂ ೫೨ ವರ್ಷದ ಮಹಿಳೆ ಸೇರಿದಂತೆ ನಾಲ್ಕು ಜನರು ಬಲಿಯಾಗಿರುವುದು ಆತಂಕ ಮೂಡಿಸಿದೆ.
ಶಿವಮೊಗ್ಗದ ಬಸವನಗಂಗೂರು ಗ್ರಾಮದಲ್ಲಿ ಪದವಿ ವಿದ್ಯಾರ್ಥಿಯೋರ್ವ ಇಂದು ಹೃದಯಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಶ್ರೀನಿಧಿ (೨೦) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದ. ಜೂನ್ ೨೯ ರ ಭಾನುವಾರ ಮುಂಜಾನೆ ಶ್ರೀನಿಧಿ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.

ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ಬಸವನಗಂಗೂರು ಗ್ರಾಮದ ನಿವಾಸಿ ಪ್ರಸನ್ನರವರು ಮಾಹಿತಿ ನೀಡಿದ್ದಾರೆ.
ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ.

ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸಂದೀಪ (೪೦) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಹಾಸನ ಜಿಲ್ಲೆಯ ಯುವಕನನ್ನು ಮದುವೆಯಾಗಿದ್ದ ಹರ್ಷಿತಾ (೨೩) ಏ.೫ ರಂದು ಎರಡನೇ ಹೆರಿಗೆಗೆ ಶಿವಮೊಗ್ಗ ಜಿಲ್ಲೆಯ ಆಯನೂರು ಹೋಬಳಿಯ ಮಂಡಘಟ್ಟ ತಾಲೂಕಿನ ದ್ಯಾವನಕೆರೆಯಲ್ಲಿರುವ ತವರು ಮನೆಗೆ ಬಂದಿದ್ದರು. ಮೇ೨೪ ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿ ೩೪ ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಶಿವಮೊಗ್ಗದ ಮೆಗ್ಗಾನ್ಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಸಾವಾಗಿದೆ.
ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (೫೨) ಹೃದಯಾಘಾತಕ್ಕೆ ಒಳಗಾಗಿ ಸಾವುಕಂಡಿದ್ದಾರೆ.