ಶಿವಮೊಗ್ಗ : ಎಸ್ಐಆರ್ (ಮತಪಟ್ಟಿ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ಬಿಜೆಪಿ ಜುಲೈ ೨೫-೨೬ರಂದು ಹಮ್ಮಿಕೊಂಡಿರುವ ಮಹಾ ಸಂಪರ್ಕ ಅಭಿಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆ ಆರಂಭವಾಗಿ ೨೫ ದಿನಗಳಾಗಿವೆ. ಬಿಜೆಪಿ ಜಿಲ್ಲೆಯ ಎಲ್ಲಾ ೧೭೯೩ ಮತಗಟ್ಟೆಗಳಲ್ಲಿ ಎಸ್ಐಆರ್ ಯಶಸ್ವಿಗೊಳ್ಳಲು ಬಿಎಲ್ಎಗಳ ಟೋಳಿ ರಚಿಸಲಾಗಿದೆ. ಬೂತಿಗೊಂದರಂತೆ ೧೨ ಜನರ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ೨,೭೭,೦೦೦ ಮತದಾರರ ಪರಿಷ್ಕರಣೆಯ ಗುರು ಹೊಂದಲಾಗಿದ್ದು, ಈಗಾಗಲೇ ೧,೯೯,೦೦೦ ಮತದಾರರ ಪರಿಷ್ಕರಣೆ ಪೂರ್ಣಗೊಂಡಿದೆ. ಜುಲೈ ೨೫-೨೬ರಂದು ಜಿಲ್ಲೆಯ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಜನಪ್ರತಿನಿಧಿಗಳು ಪ್ರತ್ಯಕ್ಷವಾಗಿ ಮನೆ ಮನೆಗೆ ತೆರಳಿ ಅಭಿಯಾನದ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಜಿಲ್ಲಾದ್ಯಂತ ಪಕ್ಷದ ೨೧,೬೦೮ ಕಾರ್ಯಕರ್ತರು, ಮುಖಂಡರು, ಈ ಅಭಿಯಾನದಂದು ಬೆಳಿಗ್ಗೆ ೨೫ ಮನೆ, ಸಂಜೆ ೨೫ ಮನೆ ಹೀಗೆ ಮನೆ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ನಗರವೊಂದರಲ್ಲೇ ೩,೧೩೦ ಕಾರ್ಯಕರ್ತರು ಈ ಬೃಹತ್ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಅಭಿಯಾನದ ಎರಡು ದಿನಗಳಲ್ಲೇ ಜಿಲ್ಲೆಯ ೧,೪೩,೮೦೦ ಮನೆಗಳನ್ನು ನೇರವಾಗಿ ಸಂಪರ್ಕಿಸುವುದರ ಮೂಲಕ ರಾಜ್ಯಾದ್ಯಂತ ಸುಮಾರು ೧ ಕೋಟಿ ಮನೆಗಳ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದ ಅವರು, ಈಗಾಗಲೇ ಫಾರಂ ಭರ್ತಿಮಾಡಿಕೊಟ್ಟ ಮನೆಗಳಿಗೆ ಧನ್ಯವಾದ ಸಲ್ಲಿಸುವುದು ಹಾಗೂ ಫಾರಂ ತಲುಪದ ಮನೆಗಳಿಗೆ ಬಿಎಲ್ಎ-೨/ಬಿಎಲ್ಓಗಳ ಮೂಲಕ ತಕ್ಷಣವೇ ಫಾರಂ ತಲುಪಿಸಿ, ಭರ್ತಿಮಾಡಿ, ವಾಪಸ್ ತರುವ ಜವಾಬ್ದಾರಿಯನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರಮೋದಿಯವರ ೧೩೬ನೇ ಮನ್ ಕೀ ಬಾತ್ ಕಾರ್ಯಕ್ರಮ ಭಾನುವಾರ ಆಕಾಶವಾಣಿ ಮೂಲಕ ನೇರ

ಪ್ರಸಾರವಾಗಲಿದ್ದು, ಅದನ್ನು ಈ ಬಾರಿ ಶಿವಮೊಗ್ಗದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ನಗರದ ಡಾ.ಬಿ.ಆರ್.ಅಂಬೇಡ್ಕರ್ (ಜೈಲ್ ಸರ್ಕಲ್)ವೃತ್ತದಲ್ಲಿ ಇರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೧೦-೩೦ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ೧೧ಗಂಟೆಗೆ ನೇರ ಪ್ರಸಾರ ವೀಕ್ಷಣೆ ಮಾಡಲಾಗುತ್ತದೆ. ಇದರಲ್ಲಿ ಸಮಾಜದ ಎಲ್ಲಾ ಸ್ತರದ ಸುಮಾರು ೩೦೦ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದರು.
ಗುರುವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಛೇರಿ ಧ್ವಂಸಕ್ಕೆ ನುಗ್ಗಲೆತ್ನಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಶಾಸಕರು, ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವಕ್ಕಿಂತ ಹಿಂಸಾಚಾರ ಹಾಗೂ ಸಂಘರ್ಷವೇ ಮುಖ್ಯವಾಗಿದೆ ಎಂಬುದನ್ನು ನಿನ್ನೆಯ ಘಟನೆ ರುಜುವಾತು ಪಡಿಸಿದೆ. ಇದೇ ರೀತಿ ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಸಕರ ಬಸ್ಸಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿದ್ದಲ್ಲದೆ, ರಾಜ್ಯದ ಜವಾಬ್ದಾರಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೇಳಿ ಮಾಡಿಸಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಪೊಲೀಸ್ ರಕ್ಷಣೆಯಲ್ಲಿದ್ದ ಬಿಜೆಪಿ ಶಾಸಕರಿಗೇ ರಕ್ಷಣೆ ಕೊಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಇನ್ನು ರಾಜ್ಯದ ಪ್ರಜೆಗಳಿಗೆ ಹೇಗೆ ರಕ್ಷಣೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ದತ್ತಿನಿಧಿ ಪ್ರಶಸ್ತಿಗಳಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರಾದ ಜಿ.ವಾದಿರಾಜ್, ಶ್ರೀಕಾಂತ್ ಭಟ್ ಮತ್ತು ಕಣ್ಣಪ್ಪ ಅವರನ್ನು ಜಿಲ್ಲಾ ಬಿಜೆಪಿ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರಿಕೃಷ್ಣ, ದೀನ್ದಯಾಳ್, ನವುಲೆ ಮಂಜುನಾಥ್, ಎನ್.ಜೆ. ನಾಗರಾಜ್, ವಿಶ್ವನಾಥ್, ಶ್ರೀನಾಗ್, ಎನ್.ಮಂಜುನಾಥ್, ಎಸ್.ಚಂದ್ರಶೇಖರ್ ಮೊದಲಾದವರಿದ್ದರು