ಶಿವಮೊಗ್ಗ : ಪತ್ರಿಕೋದ್ಯಮದ ಸವಾಲುಗಳ ನಡುವೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ವತಂತ್ರ ಪತ್ರಕರ್ತನಾಗಿ ಬೆಳೆಯಬಹುದಾದ ವಿಪುಲ ಅವಕಾಶ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇದ್ದು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಪತ್ರಕರ್ತ ಹಾಗೂ ಲೇಖಕ ಟೆಲೆಕ್ಸ್ ರವಿಕುಮಾರ್ ಹೇಳಿದರು.


ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪರಿಣಿತ ಪ್ರಾಧ್ಯಾಪಕರು-ಉಪನ್ಯಾಸ ಸರಣಿಯ (ಶೈಕ್ಷಣಿಕ ಕ್ರಾಂತಿಯ ಹೊಸ ಮನ್ವಂತರ ಪಾಠಶಾಲೆ) ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಪತ್ರಿಕೋದ್ಯಮ ಇಂದು ಬದಲಾಗುತ್ತಿದೆ. ಮಾಧ್ಯಮ, ಉದ್ಯಮ, ಧರ್ಮ ಇವುಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ ಅದರ ಆಚೆಯಿಂದ ಬಿಡುಗಡೆಯಾಗಿ ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವ ಗುಣವನ್ನು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಕಾಲ ಬದಲಾದಂತೆ ಮೊಬೈಲ್ ಹಿಡಿದವರು ಕೂಡ ಇಂದು ಪತ್ರಕರ್ತರಾಗಿ ರೂಪಿತಗೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ನಾವು ವೇಗವಾಗಿ ತಲುಪಿಸಬಹುದಾಗಿದೆ. ಆದರೆ ಇವೆಲ್ಲವೂ ಒಂದು ಚೌಕಟ್ಟಿನೊಳಗೆ ಇರಬೇಕಾಗುತ್ತದೆ. ತರಗತಿಯ ಒಳಗೆ ಕಲಿಯುವುದಕ್ಕಿಂತ ಹೊರಗೆ ಕಲಿಯವುದೇ ಸಾಕಷ್ಟು ಇರುತ್ತದೆ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಆಶಯವಾಗಿದ್ದು, ಪ್ರಶ್ನೆ ಮಾಡುವುದು, ಸಹಜವಾಗಿದೆ. ಅದಕ್ಕೆ ಉತ್ತರ ಹೇಳುವವರು ಸರ್ಕಾರವೇ ಆಗಿದೆ. ಆದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ದಾರಿತಪ್ಪಿದಾಗ ಪತ್ರಿಕಾರಂಗ ಅದಕ್ಕೆ ಧ್ವನಿಯಾಗಬೇಕು ಆದರೆ ಪತ್ರಿಕಾರಂಗವು ಸೋತರೆ ಪ್ರಜಾಪ್ರಭುತ್ವವೇ ಕುಸಿದು ಬೀಳುತ್ತದೆ. ಈ ಎಚ್ಚರಿಕೆ ಪತ್ರಿಕೋದ್ಯಮಕ್ಕೆ ಬರುವವರೆಗೆ ಇರಬೇಕಾಗುತ್ತದೆ. ಪ್ರಜಾಪ್ರಭುತ್ವ ಕಾವಲು ನಾಯಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರದ ಸುಳಿವನ್ನು ಕೂಡ ತಿಳಿಯುವ ಮತ್ತು ವಿಮರ್ಶೆ ಮಾಡುವ ಅವಶ್ಯಕತೆ ಇಂದು ಇದೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹಾದೇವ ಸ್ವಾಮಿ, ಉಪನ್ಯಾಸಕಿ ವರ್ಣ, ಪತ್ರಕರ್ತ ದೇಶಾದ್ರಿ ಹೊಸ್ಮನೆ ಇದ್ದರು.