ಆನಂದಪುರ, ಜುಲೈ 24: ಆನಂದಪುರ ಹೋಬಳಿಯ ಯಡೇಹಳ್ಳಿ ಗ್ರಾಮದ ಸರ್ವೇ ನಂ. 117ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲು ನಡೆಸಿದ್ದ ಪ್ರಯತ್ನವನ್ನು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಯಡೇಹಳ್ಳಿ ಗ್ರಾಮದ ನಿವಾಸಿ ಕುಂಟೇಗೌಡ ಅವರು ಸರ್ಕಾರಿ ಜಾಗದಲ್ಲಿ ಸೋಲಾರ್ ತಂತಿಯಿಂದ ಬೇಲಿ ನಿರ್ಮಿಸಿ, ದೊಡ್ಡ ಬಾಳೆ ಗಿಡಗಳನ್ನು ನೆಟ್ಟು ಒತ್ತುವರಿ ಮಾಡಲು ಪ್ರಯತ್ನಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಮೇರೆಗೆ ಅಧಿಕಾರಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ನಿರ್ಮಿಸಿದ್ದ ಬೇಲಿ ಹಾಗೂ ನೆಟ್ಟಿದ್ದ ಗಿಡಗಳನ್ನು ತೆರವುಗೊಳಿಸಿದರು.

ಗ್ರಾಮದಲ್ಲಿ ಜಾನುವಾರು ಮೇಯಿಸಲು ಲಭ್ಯವಿರುವ ಪ್ರದೇಶ ಅತಿ ಕಡಿಮೆಯಿದ್ದು, ಇಂತಹ ಸರ್ಕಾರಿ ಜಾಗಗಳು ಅಕ್ರಮ ಒತ್ತುವರಿದಾರರ ಪಾಲಾದರೆ ಜಾನುವಾರುಗಳನ್ನು ಸಾಕುವುದು ಕಷ್ಟಕರವಾಗಿ, ಅವುಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಪ್ರಯತ್ನಿಸುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಾನಂದ ಗೇರುಬೀಸು, ಗೋಪಿ ಗೇರುಬೀಸು, ಸುರೇಶ್, ರವಿ ಹಾಗೂ ಕೇಶವ ಉಪಸ್ಥಿತರಿದ್ದರು.
ವಲಯ ಅರಣ್ಯಾಧಿಕಾರಿ ಗೀತಾ ಅವರ ಆದೇಶದ ಮೇರೆಗೆ ಆನಂದಪುರ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚೇತನ್, ಗೌತಮಪುರ ಶಾಖೆಯ ಚಂದ್ರಶೇಖರ್, ಬೀಟ್ ಫಾರೆಸ್ಟರ್ಗಳಾದ ಪ್ರದೀಶ್, ವಿನಯ್, ಸೈಯದ್ ಹಾಗೂ ಸಿಬ್ಬಂದಿಗಳಾದ ಸತ್ಯನಾರಾಯಣ, ಭೋಜಪ್ಪ, ಪ್ರವೀಣ ಮತ್ತು ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.