ಶಿವಮೊಗ್ಗ : ಇಲ್ಲಿಯ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಇರುವ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಜಾಗವನ್ನು ಆಟದ ಮೈದಾನವನ್ನಾಗಿಯೇ ಸಂರಕ್ಷಿಸುವಂತೆ ಆಗ್ರಹಿಸಿ ರಾಷ್ಟ್ರಭಕ್ತ ಬಳಗದ ಕಾನೂನು ವಿಭಾಗದ ವತಿಯಿಂದ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಾನೂನು ವಿಭಾಗದ ವಕೀಲ ವಾಗೀಶ್ ಮಾತನಾಡಿ, ಅನುಸೂಚಿತ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬರಲಾಗಿದೆ. ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದ್ದು ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿರುತ್ತದೆ ಎಂದರು.

ಈ ಜಾಗಕ್ಕೆ ಲಗತ್ತಾಗಿ ಸರ್ಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಆರ್.ಟಿ.ಓ. ಕಚೇರಿ, ಜಯನಗರ ಪೆÇೀಲೀಸ್ ಠಾಣೆ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನೂ ಹತ್ತು ಹಲವು ಖಾಸಗಿ ವಾಣಿಜ್ಯ ವ್ಯವಹಾರ ನಡೆಯುವ ಸ್ಥಳದ ಮಧ್ಯಭಾಗದಲ್ಲಿ ಇರುವ ಖಾಲಿ ಜಾಗವಾಗಿದ್ದು, ಸದರಿ ಜಾಗವನ್ನು ಹಲವಾರು ದಶಕಗಳಿಂದಲು ಸಾರ್ವಜನಿಕರು ತಮ್ಮ ತಮ್ಮ ದೈನಂದಿನ ಬ್ಯಾಂಕ್, ಸರ್ಕಾರಿ ಕಚೇರಿ ಹಾಗು ಇನ್ನಿತರೆ ಕಾರ್ಯಗಳಿಗೆ ತಮ್ಮ ಓಡಾಟ, ವಾಹನ ನಿಲುಗಡೆ ಮತ್ತು ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು ನಿರ್ವಿವಾದಿತ ಜಾಗವಾಗಿದೆ.

ಈಗಾಗಲೇ ಸರ್ಕಾರವು, ಆದೇಶ ಸಂಖ್ಯೆ ನ.ಇ.ಇ.159ಬೆಂರೂಪ್ರಾ 2012. ಬೆಂಗಳೂರು ದಿನಾಂಕ: 27/08/2012 ರನ್ವಯ ಶಿವಮೊಗ್ಗ ಮಹಾನಗರ ಯೋಜನೆ 2031ರ ದೊಡ್ಡ ಯೋಜನೆಯನ್ನು ರೂಪಿಸಿ ಶಿವಮೊಗ್ಗ ಮಹಾನಗರವು ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಈ ಬಗ್ಗೆ ತೀರ್ಮಾನ ಕೈಗೊಂಡು ಶಿವಮೊಗ್ಗ ಮಹಾನಗರ ಯೋಜನೆ-2031 ರ ರಾಜ್ಯ ಸರ್ಕಾರದ ವತಿಯಿಂದ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಮಹಾನಗರ ಯೋಜನೆಯ ಒಂದು ಮಾಸ್ಟರ್ ಪ್ಲಾನ್ ರಚಿತಗೊಂಡಿದ್ದು ಸದರಿ ಪ್ಲಾನ್ ಸಹ 2012ರಲ್ಲಿಯೇ ಅನುಮೋದನೆಗೊಂಡು ಗೆಜೆಟ್ ಅಧಿಸೂಚನೆಯಲ್ಲಿ ಘೋಷಿತವಾಗಿರುತ್ತದೆ. ಸದರಿ ಶಿವಮೊಗ್ಗ ಮಹಾನಗರ ಯೋಜನೆ-2031ರ ಮಹಾನಕ್ಕೆ ಮತ್ತು ಸಂಪೂರ್ಣ ಜೋನಲ್ ರೆಗ್ಯುಲೇಶನ್ ಇದನ್ನು ಅನುಮೋದಿಸಿದ್ದು, ಸದರಿ ಮಹಾನಕ್ಷೆಯನ್ವಯ ಪ್ರಶ್ನಿತ ಸ್ವತ್ತು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವಾಗಿದ್ದು ದಟ್ಟ ಹಸಿರು ಬಣ್ಣದಿಂದ ಗುರುತಿಸಲ್ಪಟ್ಟಿದೆ ಎಂದು ಆಯುಕ್ತರ ಗಮನ ಸೆಳೆದರು.
ಹಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಅನುಸೂಚಿತ ಸ್ವತ್ತನ್ನು ಈದ್ದಾ ವಕ್ಫ್ ಗೆ ಸೇರಿದ ಸ್ವತ್ತೆಂದು ತಪ್ಪಾಗಿ ಅರ್ಥೈಸಿಕೊಂಡು ಕಾನೂನುಬಾಹಿರವಾಗಿ ಸ್ವತ್ತಿನ ಪಶ್ಚಿಮ ದಿಕ್ಕಿನಲ್ಲಿರುವ 20 ಅಡಿ ವಿಸ್ತೀರ್ಣದ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 1.2ಮೀ. ಮತ್ತು 6.8ಮೀ.ನ ಒಂದು ಗೋಡೆ ಆಕಾರದ ಧಾರ್ಮಿಕ ಆಕೃತಿಯನ್ನು ಅನಧಿಕೃತವಾಗಿ ಕಟ್ಟಿ ತಮ್ಮ ಧಾರ್ಮಿಕವಾದ ಭಾವನೆಗನುಸಾರವಾಗಿ ಸದರಿ ಗೋಡೆಯಾಕೃತಿಗೆ ಅಭಿಮುಖವಾಗಿ ಕೇವಲ ವರ್ಷಕ್ಕೆರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ದಿನದಂದು ಮಾತ್ರ ಸಾಮೂಹಿಕ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಆ ಜಾಗ ತಮ್ಮದೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಯಾವುದೇ ಸ್ಥಳದ ಚಕ್ಕುಬಂಧಿಯ ವಿವರಗಳು ಇಲ್ಲದಾಗ್ಯೂ ಸದರಿ ಸ್ವತ್ತು ಅಜರ್ ಮೊಹಲ್ಲಾ ಎಂಬ ವಿಳಾಸ ಮಾತ್ರ ಇರುತ್ತದೆ. ಸದರಿ ಅಜರ್ ಮೊಹಲ್ಲ ಹಾಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಶಿವಪ್ಪ ನಾಯಕ ವೃತ್ತ / ಅಮೀರ್ ಅಹ್ಮದ್ ವೃತ್ತ ಎಂದು ಕರೆಯಲ್ಪಡುವ ಜಾಗದಿಂದ ಎಂ.ಕೆ.ಕೆ. ರಸ್ತೆಯ ಜಾಗದಲ್ಲಿರುವ ಪ್ರದೇಶವಾಗಿದ್ದು, ಸುಮ್ಮನೆ ದುರುದ್ದೇಶದಿಂದ ಯಾವುದೋ ಜಾಗದ ನೋಟಿಫಿಕೇಷನ್ ಪಡೆದುಕೊಂಡು ಈ ಆಟದ ಮೈದಾನ ಜಾಗವನ್ನು ಕಬಳಿಸುವ ಪ್ರಯತ್ನ ಮಾಡುತ್ತಿದ್ದುದಲ್ಲದೆ ಯಾವುದೇ ದಾಖಲಾತಿಗಳ ಆಧಾರವಿಲ್ಲದೇ ಈದ್ದಾ ವಕ್ಷ ಹೆಸರಿಗೆ ಪ್ರಶ್ನಿತ ಜಾಗದ ಖಾತೆಯ ವಿಸ್ತೀರ್ಣವನ್ನು ಹೆಚ್ಚುವರಿ ಮಾಡಿ ನಮೂದು ಮಾಡಿರುವುದು ಸರ್ಕಾರಕ್ಕೆ ಮಾಡಿರುವ ಅನ್ಯಾಯವಾಗಿರುತ್ತದೆ ಎಂದು ಅಸಕ್ರೊಇಶ ವ್ಯಕ್ತಪಡಿಸಿದರು.
ಸದರಿ ಜಾಗವು ‘ವಕ್ಸ್” ಮಂಡಳಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲೆಗಳಿಲ್ಲದಿದ್ದರೂ ನಿಯಮ ಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ. ಇದಕ್ಕೆ ಸಂಭಂದಿಸಿದಂತೆ ಅಂದಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಭೂಮಾಪಕರು ಸಲ್ಲಿಸಿದ ನಕ್ಷೆಯಲ್ಲಿ ಸದರಿ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲದಿರುವುದನ್ನು ಗುರುತಿಸಿರುತ್ತಾರೆ ಹಾಗೂ ಸದರಿ ಸ್ಥಳದ ವಿಳಾಸವು ಗೆಜೆಟ್ ನೋಟಿಪಿಕೇಷನ್ನಲ್ಲಿ ಇರುವುದಿಲ್ಲ ಎಂದಿದ್ದಾರೆ.
ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್ ಮಾತನಾಡಿ, ನಗರದ ಲೋಕಲ್ ಪ್ಲಾನಿಂಗ್ ಏರಿಯ ನಕ್ಷೆಯನ್ನು ಗಮನಿಸಿದಾಗ ಶಿವಮೊಗ್ಗ ಮಹಾನಗರ ಯೋಜನೆ 2031’ರ ಪ್ರಕಾರ ಸದರಿ ಜಾಗವು ದಟ್ಟ ಹಸಿರು (ಡಾರ್ಕ್ ಗ್ರೀನ್) ಬಣ್ಣದಿಂದ ಗುರುತಿಸಲ್ಪಟ್ಟದ್ದು ಮತ್ತು ಈಗಾಗಲೇ “ನಿರ್ಮಿತ ಉದ್ಯಾನ ವೆಂದು ಘೋಷಿತವಾಗಿರುತ್ತದೆ. ಕಾನೂನಿನ ಪ್ರಕಾರ ಈ ಜಾಗವನ್ನು ಉದ್ಯಾನವನ, ಸ್ಮಾಶಾನ ಹಾಗೂ ಆಟದ ಮೈದಾನವನ್ನಾಗಿ ಉಪಯೋಗಿಸಬಹುದೇ ಹೊರತು ಬೇರೆ ಉದ್ದೇಶಗಳಿಗೆ ಉಪಯೋಗಿಸುವಂತಿಲ್ಲ ಎಂದರು. ಸದರಿ ಮೈದಾನ ಹಿಂದೂಗಳ ಅಸ್ಮಿತೆಯ ದ್ಯೋಕವಾಗಿದೆ. ಯಾವುದೇ ಕಾರಣಕ್ಕು ಈ ಜಾಗವನ್ನು ಮುಸ್ಲಿಮರಿಗೆ ಬಿಟ್ಟುಕೊಡಬಾರದು ಎಂದರು.
ಈ ಮೈದಾನಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಆಯುಕ್ತರಿಗೆ ಸಲ್ಲಿಸಿದ್ದು ಅವುಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಮಾನ್ಯ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿಯನ್ನು ರವಾನಿಸಬೇಕು ಎಂದು ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ವಕೀಲರಾದ ಲೋಕೇಶ್, ಸುನೀತಾ, ಪ್ರಮುಖರಾದ ಕುಬೇರಪ್ಪ ಮೊದಲಾದವರಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಕೆ., ಈಗಾಗಲೇ ಈ ಪ್ರಕರಣ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿದೆ. ಈ ಕುರಿತು ಎರಡು ಬಾರಿ ವಿಚಾರಣೆ ನಡೆದಿದೆ. ಸಧ್ಯದಲ್ಲಿಯೇ ವಿಚಾರಣೆಗೆ ಇನ್ನೊಂದು ದಿನಾಂಕ ನಿಗಧಿಯಾಗಿದೆ. ಆ ಸಂದರ್ಭದಲ್ಲಿ ಪ್ರಕರಣದ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವೆ. ನ್ಯಾಯಾಲಯದ ನಿರ್ದೇಶನದಂತೆ ಕ್ರಮಕೈಗೊಳ್ಳುವೆ ಎಂದರು.