ಶಿವಮೊಗ್ಗ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕಡು ವಿರೋಧಿ ಪಾಕಿಸ್ತಾನದ ರಕ್ಷಣಾ ಸಚಿವ ಮುನೀರ್ ಅವರಿಗೆ ವೈಟ್ ಹೌಸ್ನಲ್ಲಿ ಜೂ.೧೮ರಂದು ಔತಣಕೂಟವನ್ನು ಏರ್ಪಡಿಸಿದ್ದನ್ನು ಖಂಡಿಸಿ, ಇಂದು ನಗರದ ಮಹಾವೀರ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಮುಖಂಡರು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಡೊನಾಲ್ಡ್ ಟ್ರಂಪ್ರವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದರು.

ಕಳೆದ ತಿಂಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಕಾಶ್ಮೀರದ ಪಹಲ್ಗಾಂನಲ್ಲಿ ಪಾಕಿಸ್ತಾನ ಪೋಷಿತ ಉಗ್ರರು ಧರ್ಮಾಧಾರಿತವಾಗಿ ೨೬ ಪ್ರವಾಸಿಗರ ಹತ್ಯೆಗೈದಿದ್ದರು. ಈ ಉಗ್ರಗಾಮಿಗಳಿಗೆ ಪಾಕಿಸ್ತಾನ ಸರ್ವ ರೀತಿಯಲ್ಲಿ ರಕ್ಷಣೆ ನಿಡುವುದಾಗಿ ಇದೇ ಪಾಕಿಸ್ತಾನದ ಪಾಪಿ ರಕ್ಷಣಾ ಸಚಿವರು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಈ ಉಗ್ರರನ್ನು ಸದೆಬಡಿಯಲು ಪ್ರಧಾನಿ ನರೇಂದ್ರ ಮೋದಿಯವರು ವಿನೂತನವಾದ

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿ, ಪಾಕಿಸ್ತಾನದ ಗಡಿಯೊಳಗೂ ನುಗ್ಗಿ ಹುಡುಕಿ ಹುಡುಕಿ ಉಗ್ರರನ್ನು ಸದೆ ಬಡಿದಿರುತ್ತಾರೆ. ಈ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ದಿಗಿಲುಗೊಂಡ ಇದೇ ಪಾಕಿಸ್ತಾನದ ರಕ್ಷಣಾ ಸಚಿವ ಮುನೀರ್ ಅವರು ನಮ್ಮ ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಅಂಗಲಾಚಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲು ಗೋಗರೆದಿದ್ದು ಈಗ ಇತಿಹಾಸ.

ಇಂತಹ ಪರಮನೀಚ ಪಾಕಿಸ್ತಾನ ಹಾಗೂ ಪಾಪಿಸ್ತಾನದ ರಕ್ಷಣಾ ಸಚಿವ ಮುನೀರ್ರವರಿಗೆ ದೊಡ್ಡಣ್ಣನಾದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣ ಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವದಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕಲ್ಲೂರು ಮೇಘರಾಜ, ಹೆಚ್.ಎಂ.ಸಂಗಯ್ಯ, ಮಂಜುನಾಥ ಪಾಟೀಲ್, ಜನಮೇಜರಾವ್, ಶಂಕ್ರಾನಾಯ್ಕ, ವೇದಾನಂದ ಗೌಡ, ಕೂಡ್ಲು ಶ್ರೀಧರ್, ಚಿಕ್ಕಮಟ್ಟಿ ವೆಂಕಟೇಶ್, ಟಿ.ಹೆಚ್. ಬಾಬು ಮೊದಲಾದವರಿದ್ದರು.